

ಬೆಂಗಳೂರು: ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಕರೊನಾ ಸೋಂಕಿತರು ದುರಂತ ಅಂತ್ಯ ಕಂಡ ಬೆನ್ನಲ್ಲೇ ಇಂತಹದ್ದೇ ಮತ್ತೊಂದು ಅವಘಡ ಯಲಹಂಕ ನ್ಯೂ ಟೌನ್ನಲ್ಲಿ ಸಂಭವಿಸಿದೆ.
ಇಲ್ಲಿನ ಅರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿ ಇಬ್ಬರು ಕೋವಿಡ್ ರೋಗಿಗಳು ಮೃತಪಟ್ಟ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ. ರಾತ್ರಿ 12:30ರ ಸುಮಾರಿಗೆ ಆಕ್ಸಿಜನ್ ಖಾಲಿಗಿದ್ದು, ರಾತ್ರಿ 1:30ರ ಸುಮಾರಿಗೆ ಆಕ್ಸಿಜನ್ ತಂದರಾದರೂ ಅಷ್ಟರಲ್ಲಿ ಇಬ್ಬರ ಪ್ರಾಣ ಹೋಗಿತ್ತು.
ಅರ್ಕ ಆಸ್ಪತ್ರೆಯಲ್ಲಿ 15ಕ್ಕೂ ಹೆಚ್ಚು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ರಾತ್ರಿ ಆಕ್ಸಿಜನ್ ಖಾಲಿ ಆಗ್ತಿದ್ದಂತೆ ಇಲ್ಲಿನ ಸಿಬ್ಬಂದಿ ಯಲಹಂಕ ನ್ಯೂ ಟೌನ್ ಪೊಲೀಸರಿಗೆ ಕರೆ ಮಾಡಿದ್ದು, ಇನ್ಸ್ಪೆಕ್ಟರ್ ಸತ್ಯನಾರಾಯಣ್ ಆಸ್ಪತ್ರೆ ಬಳಿ ದೌಡಾಯಿಸಿದರು. ಕೂಡಲೇ ಸೋನುಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರಿಗೆ ಕರೆ ಮಾಡಿದರು. ಮನವಿಗೆ ಸ್ಪಂದಿಸಿದ ಸೋನು ಸೂದ್ ಟ್ರಸ್ಟ್ ಸಿಬ್ಬಂದಿ, 11 ಆಕ್ಸಿಜನ್ ಸಿಲಿಂಡರ್ ಒದಗಿಸುವ ಮೂಲಕ ದೊಡ್ಡ ಅನಾಹುತವನ್ನ ತಪ್ಪಿಸಿದ್ದಾರೆ. ಟ್ರಸ್ಟ್ನ ಅಶ್ಮತ್, ರಾಧಿಕಾ, ರಾಘವ್ ಸಿಂಗಲ್, ಅಮಿತ್ ತಂಡ ಬೈಕ್ ಹಾಗೂ ಕಾರುಗಳಲ್ಲಿ ಆಕ್ಸಿಜನ್ ಸಿಲಿಂಡರ್ ಪೂರೈಸಿದ್ದಾರೆ.
ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರಲ್ಲಿ ಓರ್ವ ಮಹಿಳೆಯೂ ಸೇರಿದ್ದಾರೆ. ಇವರನ್ನ ಶನಿವಾರ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೆವು. ನನ್ನ ಅಕ್ಕನಿಗೆ 38 ವರ್ಷ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಅಗಲಿಕೆಯಿಂದ ಕುಟುಂಬ ಕಂಗಾಲಾಗಿದೆ ಎಂದು ಮೃತಳ ತಮ್ಮ ಅನಿಲ್ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.