ಶೂ ಧರಿಸಿ ಪೂಜೆ ಸಲ್ಲಿಸಿದ ಉಮೇಶ್​ ಕತ್ತಿ! ಮೈಸೂರು ದಸರಾ ಗಜಪಯಣಕ್ಕೆ ಚಾಲನೆ ನೀಡುವಾಗ ಎಡವಟ್ಟು

1319939
Published on

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಮುನ್ನುಡಿಯಂತಿರುವ ಗಜಪಯಣಕ್ಕೆ ಅರಣ್ಯ ಸಚಿವ ಉಮೇಶ್ ಕತ್ತಿ ಶೂ ಧರಿಸಿಯೇ ಪೂಜೆ ಸಲ್ಲಿಸಿರುವುದು ಟೀಕೆಗೆ ಕಾರಣವಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿಯಲ್ಲಿ ಭಾನುವಾರ 'ಗಜಪಯಣ'ಕ್ಕೆ ಚಾಲನೆ ನೀಡುವಾಗ ಪೂಜಾ ಸ್ಥಳಕ್ಕೆ ಶೂ ಧರಿಸಿಯೇ ಬಂದ ಉಮೇಶ್​ ಕತ್ತಿ, ಅಂಬಾರಿ ಆನೆ ಅಭಿಮನ್ಯು ಸೇರಿದಂತೆ 9 ಆನೆಗಳಿಗೆ ಪೂಜೆ ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವಾಗ ಸಂಪ್ರದಾಯದಂತೆ ಶೂ/ ಪಾದರಕ್ಷೆ ಕಳಚಿದ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಎಸ್.ಟಿ.ಸೋಮಶೇಖರ್, ಶಾಸಕ ಎಚ್.ಪಿ.ಮಂಜುನಾಥ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೇರಿದಂತೆ ಎಲ್ಲ ಗಣ್ಯರೂ ಸಂಪ್ರದಾಯವನ್ನು ಪಾಲಿಸಿದ್ದರು‌.

ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಕೂಡ ಪಾದರಕ್ಷೆ ಧರಿಸಿ ಬಂದಿದ್ದರು. ಎಚ್ಚೆತ್ತುಕೊಂಡ ಅವರು ಅದನ್ನು ತೆಗೆದಿರಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಆದರೆ, ಸಚಿವ ಉಮೇಶ ಕತ್ತಿ ಅವರು ಕೊನೆಯವರೆಗೂ ಶೂ ಧರಿಸಿಯೇ ಇದ್ದರು. ಅವರಿಗೆ ನೆನಪಿಸುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ. ಶೂ ಧರಿಯೇ ಪೂಜೆ ಮಾಡುತ್ತಿರುವ ಫೋಟೋ ವೈರಲ್​ ಆಗಿದ್ದು, ಉಮೇಶ್​ ಕತ್ತಿ ಅವರ ನಡೆಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net