ಮೈಸೂರಿಗೆ ಬಂದ ರೋಬೋ ಸುಂದರಿ! ಸೀರೆಯುಟ್ಟ ಸಪ್ಲೆಯರ್​... ಗ್ರಾಹಕರು ಫುಲ್​ ಖುಷ್​

supplier robot
Published on

ಮೈಸೂರು: ಗ್ರಾಹಕರಿಗೆ ಬಗೆ ಬಗೆಯ ತಿನಿಸುಗಳನ್ನು ಉಣಬಡಿಸಲು ಸಾಂಸ್ಕೃತಿಕ ನಗರಿ ಮೈಸೂರಿಗೆ 'ರೋಬೋ ಸುಂದರಿ' ಆಗಮಿಸಿದ್ದಾಳೆ.

ನಗರದ ಶ್ರೀ ಜಯಚಾಮರಾಜೇಂದ್ರ ಒಡೆಯರ್​ ವೃತ್ತದ ಬಳಿಯ ಸಿದ್ಧಾರ್ಥ ಹೋಟೆಲ್​ನಲ್ಲಿ ಫೆ.15ರಿಂದ ರೋಬಾಟ್​ ಕಾರ್ಯಾರಂಭ ಮಾಡಿದೆ. ಗ್ರಾಹಕರಿಗೆ ಸರ್ವ್​ ಮಾಡುವ ರೋಬಾಟ್​ಗಳು ಸದ್ಯ ಚೆನ್ನೈ, ಹೈದರಾಬಾದ್​, ಶಿವಮೊಗ್ಗದಲ್ಲಿ ಮಾತ್ರ ಇವೆ. ಇದೀಗ ಮೈಸೂರಿನಲ್ಲೂ ಕಾಣಬಹುದು. ಈ ರೋಬಾಟ್​ಗೆ ಸೀರೆ ಉಡಿಸಿ ಮೈಸೂರಿನ ಸಂಸ್ಕೃತಿಯ ಮೆರುಗು ನೀಡಿರುವುದು ವಿಶೇಷ.

ಗ್ರಾಹಕರನ್ನು ಆಕರ್ಷಿಸಲು ಹಾಗೂ ಹೋಟೆಲ್​ ಉದ್ಯಮ ಎದುರಿಸುತ್ತಿರುವ ನೌಕರರ ಕೊರತೆ ನೀಗಿಸಲು ರೋಬಾಟ್​ ಸಹಕಾರಿಯಾಗಿದೆ. ಇದು ಬ್ಯಾಟರಿಚಾಲಿತ ರೋಬಾಟ್​ ಆಗಿದ್ದು, 4 ಗಂಟೆಗಳ ಕಾಲ ಚಾರ್ಚ್​ ಮಾಡಿದರೆ 8 ತಾಸು ಕಾರ್ಯನಿರ್ವಹಿಸುತ್ತದೆ. ಅಡುಗೆ ಕೋಣೆಯಿಂದ ಗ್ರಾಹಕರು ಕೂರುವ ಪ್ರತಿ ಟೇಬಲ್​ಗೆ ಮ್ಯಾಗ್ನೆಟಿಕ್​ ಸ್ಟ್ರೆಪ್​ ಅಳವಡಿಸಲಾಗಿದೆ. ಗರಿಷ್ಠ 10 ಕೆಜಿಯಷ್ಟು ತೂಕ ಹೊರಬಲ್ಲ ಸಾಮರ್ಥ್ಯ ಹೊಂದಿದೆ.

ಈ ರೋಬಾಟ್​ ಬಹುತೇಕ ಸಪ್ಲೆಯರ್​ ರೀತಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಗ್ರಾಹಕರು ಹೋಟೆಲ್​ ಸಿಬ್ಬಂದಿ ಬಳಿ ಆರ್ಡರ್​ ಮಾಡಿದ ತಿಂಡಿಯನ್ನು ರೋಬಾಟ್​ ಕೈಯಲ್ಲಿರುವ ಟ್ರೇ ಮೇಲೆ ಇಟ್ಟು ಟೇಬಲ್​ ಸಂಖ್ಯೆ ತಿಳಿಸಿದರೆ ನಿದಿರ್ಷ್ಟ ಟೇಬಲ್​ನ ಗ್ರಾಹಕರಿಗೆ ಸೇವೆ ನೀಡಲಿದೆ. ಟೇಬಲ್​ ಬಳಿ ರೋಬಾಟ್​ ಬಂದು ನಿಂತ ನಂತರ ಗ್ರಾಹಕರೇ ತಾವು ಆರ್ಡರ್​ ಮಾಡಿದ ತಿಂಡಿ-ತಿನಿಸುಗಳನ್ನು ತೆಗೆದುಕೊಳ್ಳಬೇಕು. ಆರ್ಡರ್​ ಅನ್ನು ಹೋಟೆಲ್​ ಸಿಬ್ಬಂದಿ ತೆಗೆದುಕೊಳ್ಳುತ್ತಾರೆ. ರೋಬಾಟ್​ನಲ್ಲಿ ನಗರದ ಪ್ರೇಕ್ಷಣಿಯ ಸ್ಥಳ, ಅವುಗಳ ದೂರ, ಮೈಸೂರಿನ ಸಂಕ್ಷಿಪ್ತ ಇತಿಹಾಸ, ಹೋಟೆಲ್​ ಮೆನು ಸೇರಿದಂತೆ ಹಲವು ಮಾಹಿತಿಗಳನ್ನು ಅಳವಡಿಸಲಾಗಿದೆ. ರೋಬಾಟ್​ ಸಪ್ಲೆಯರ್​ ಅನ್ನು ಗ್ರಾಹಕರು ಕುತೂಹಲದಿಂದಲೇ​ನೋಡುತ್ತಾ ಖುಷಿ ವ್ಯಕ್ತಪಡಿಸಿದ್ದಾರೆ.

ಹೋಟೆಲ್​ ಉದ್ಯಮ ಸಾಮಾನ್ಯವಾಗಿ ಸಿಬ್ಬಂದಿ ಕೊರತೆ ಸಮಸ್ಯೆಯನ್ನು ಎದುರಿಸುತ್ತದೆ. ಇದಕ್ಕೆ ಪರಿಹಾರವಾಗಿ ರೋಬಾಟ್​ ಪರಿಚಯಿಸುತ್ತಿದ್ದೇವೆ. ಒಟ್ಟು 6 ರೋಬಾಟ್​ಗಳನ್ನು ತರಿಸುವ ಉದ್ದೇಶ ಹೊಂದಿದ್ದೇವೆ. ಸದ್ಯಕ್ಕೆ ಒಂದು ತರಿಸಿಕೊಳ್ಳಲಾಗಿದ್ದು, ಇದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂದು ನೋಡಿಕೊಂಡು ಮುಂದೆ ಹಂತ ಹಂತವಾಗಿ ಖರೀದಿಸಲಾಗುವುದು. ಒಂದು ರೋಬಾಟ್​ಗೆ 2.50 ಲಕ್ಷ ರೂ. ವೆಚ್ಚವಾಗಿದೆ.

| ಪಿ.ವಿ.ಗಿರಿ ಅಧ್ಯಕ್ಷ, ಸಿದ್ಧಾರ್ಥ ಗ್ರೂಪ್ಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net