

ಮೈಸೂರು: ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆ ಲಲಿತಾರಾಣಿಯಿಂದ ನನಗೆ ತೊಂದರೆ ಮಾಡಿಸುತ್ತಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದರಿಂದ ನಮ್ಮ ಮನೆಯಲ್ಲಿ ಅಶಾಂತಿ ಉಂಟಾಗಿದೆ. ಸಭೆಯಲ್ಲಿ ಅವಮಾನ ಮಾಡಿದ್ದಾರೆ... ಎಂದು ಡೆತ್ನೋಟ್ ಬರೆದಿಟ್ಟು ಅಂಗನವಾಡಿ ಕಾರ್ಯಕರ್ತೆಯೊಬ್ಬರು ವಿಷ ಸೇವಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮೈಸೂರು ಜಿಲ್ಲೆ ದೊಡ್ಡ ಮಾರಗೌಡನಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸುಮತಿ ಆತ್ಮಹತ್ಯೆಗೆ ಯತ್ನಿಸಿದವರು. ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸುಮತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ವಿಷ ಕುಡಿಯುವ ಮುನ್ನ ಸುಮತಿ ಡೆತ್ನೋಟ್ ಬರೆದಿದ್ದು, ಅದರಲ್ಲಿ ತನಗಾದ ಅವಮಾನ, ಅನುಭವಿಸಿದ ನೋವಿನ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಿಡಿಪಿಒ ಮಂಜುಳಾ ಪಾಟೀಲ್, ಎಸ್‌ಒಪಿ ಪಾರ್ವತಿ ನಾಯ್ಕ್, ಡಿಡಿ ಬಸವರಾಜು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರು ಸಿಡಿಪಿಒ, ಎಸ್‌ಒಪಿ, ಡಿಡಿ ಅವರುಗಳು ಅಂಗನವಾಡಿ ಕಾರ್ಯಕರ್ತೆ ಲಲಿತಾರಾಣಿಯಿಂದ ನನಗೆ ತೊಂದರೆ ಮಾಡಿಸುತ್ತಿದ್ದಾರೆ. ಗೌರವಧನ ಸಭೆ, ವೃತ್ತ ಸಭೆಯಲ್ಲಿ ನನಗೆ ಅವಮಾನಿಸಿದ್ದಾರೆ. ಇವರೆಲ್ಲರೂ ನನಗೆ ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ಇದರಿಂದ ಮನನೊಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ನೋಟ್ ಬರೆದಿಟ್ಟು ಸುಮತಿ ವಿಷ ಸೇವಿಸಿದ್ದಾರೆ.
ಇಂತಹ ಘಟನೆ ಬೇರೆ ಎಲ್ಲಿಯೂ ನಡೆಯಬಾರದು. ಈ ಅಧಿಕಾರಿಗಳನ್ನು ಕೂಡಲೇ ಸರ್ಕಾರ ತೆಗೆದು ಹಾಕಬೇಕು. ಇಲ್ಲವಾದರೆ ನಾವೆಲ್ಲರೂ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ದೊಡ್ಡಮಾರಗೌಡನಹಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಸುಮತಿಗೆ ಇಬ್ಬರು ಮಕ್ಕಳಿದ್ದಾರೆ.