

ಕುಣಿಗಲ್: ದಶಕದ ಬಳಿಕ ಮೂಡಲ್ ಕುಣಿಗಲ್ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಈ ಐಭೋಗ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ.
ಕುಣಿಗಲ್ ಎಂದಾಕ್ಷಣ 'ಮೂಡಲ್ ಕುಣಿಗಲ್ ಕೆರೆ' ನೆನಪಾಗುತ್ತೆ. ಕುಣಿಗಲ್ ದೊಡ್ಡಕೆರೆ ಕುರಿತ ಜಾನಪದ ಗೀತೆಯೂ ಜನಜನಿತವಾಗಿದೆ. 'ನನ್ನ ಪ್ರೀತಿಯ ಹುಡುಗಿ' ಸಿನಿಮಾದಲ್ಲೂ ಈ ಗೀತೆಯನ್ನ ಬಳಸಿಕೊಳ್ಳಲಾಗಿದೆ. ಪುರಾತನ ಕುಣಿಗಲ್ ದೊಡ್ಡಕೆರೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಜೀವನಾಡಿಯಾಗಿದ್ದು, ಕೆರೆ ಕೋಡಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಜನತೆ ಖುಷಿಯಿಂದಲೇ ಬಂದು ನೀರಾಟ ಆಡುತ್ತಾ, ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ.
12 ವರ್ಷದ ಬಳಿಕ ಕುಣಿಗಲ್ ಕೆರೆ ಕೋಡಿ ಬಿದ್ದಿದು, ಕೃಷಿ ಚಟುವಟಿಕೆಗಳಿಗೆ ಮರುಜೀವ ಬಂದಂತಾಗಿದೆ. ಕೆರೆಯ ಮಡಿಲಲ್ಲೇ ಕೃಷಿ ಜಮೀನಿದ್ದರೂ ನೀರಿನ ಕೊರತೆಯಿಂದಾಗಿ ಅದೆಷ್ಟೋ ಮಂದಿ ಪಾಳು ಬಿಟ್ಟಿದ್ದಾರೆ. ಭತ್ತ ಬೆಳೆದು ದಶಕಗಳೇ ಕಳೆದಿವೆ. ಇನ್ನಾದರೂ ನೀರು ಕೊಡ್ತಾರೇನೋ ಎಂಬ ಆಶಾಭಾವದಲ್ಲಿ ರೈತರು ಕಾಯುತ್ತಿದ್ದಾರೆ.
ಕುಣಿಗಲ್ನ ದೊಡ್ಡಕೆರೆ ಸೋಮೇಶ್ವರ ದೇವಾಲಯದ ಬಳಿ ಜಾಕ್ವೆಲ್ ನಿರ್ಮಾಣ ಮಾಡಿ, ನೀರು ಶುದ್ಧೀಕರಣ ಘಟಕದಲ್ಲಿ ಸಂಸ್ಕರಿಸಿ ಪಟ್ಟಣದ 23 ವಾರ್ಡ್ಗಳ 45 ಸಾವಿರ ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಕೆರೆಕೋಡಿ ಪಟ್ಟಣದ ಜನತೆಗೆ ಅನುಕೂಲವಾಗಲಿದೆ.
ಬಿ.ಬಿ.ರಾಮಸ್ವಾಮಿಗೌಡ ಅವರು ಶಾಸಕರಾಗಿದ್ದಾಗ ಮೂಡಲ್ ಕುಣಿಗಲ್ ಕೆರೆ ಕೋಡಿಯಾಗಿತ್ತು. ಆ ವೇಳೆ ಸ್ನೇಹ ಮಿತ್ರ ಮಂಡಳಿಯು ವಿದ್ಯುತ್ ದೀಪಾಲಂಕಾರ ಮಾಡಿ ಕೆರೆಯ ಸೊಬಗನ್ನೂ ಇಮ್ಮಡಿಗೊಳಿಸಿತ್ತು. ಈ ಬಾರಿಯೂ ಕೆರೆ ಕೋಡಿಗೆ ವಿದ್ಯುತ್ ದೀಪಾಲಂಕಾರ ಮಾಡಿಸಬೇಕು ಎಂಬ ಜನರ ಆಶಯಕ್ಕೆ ಕ್ಷೇತ್ರದ ಶಾಸಕರು ಸ್ಪಂದಿಸುತ್ತಾರೇಯೇ ಎಂಬುದನ್ನ ಕಾದು ನೋಡಬೇಕು.