

ತುಮಕೂರು: ನೀರಾವರಿ ವಿಷಯದಲ್ಲಿ ನಾನು ಜಾತಿ ರಾಜಕಾರಣ ಮಾಡುತ್ತಿಲ್ಲ. ಅಂತಹ ಕೀಳು ಮಟ್ಟದ ರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ. ಪಾಪ-ಪುಣ್ಯ ಗೊತ್ತಿರುವವರು ಯೋಚನೆ ಮಾಡಲಿ ಎನ್ನುತ್ತಲೇ ಸಚಿವ ಮಾಧುಸ್ವಾಮಿ ಕಣ್ಣೀರಿಟ್ಟರು.
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪದ ತಿಮ್ಲಾಪುರ ಕೆರೆ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಗೌರವಾರ್ಪಣೆ ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡಿದ ಸಚಿವರು, ಚಿಕ್ಕನಾಯಕನಹಳ್ಳಿ ತಾಲೂಕಿಗೆ ನೀರಾವರಿ ವಿಷಯದಲ್ಲಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಲವು ಆರೋಪಿಸುತ್ತಿದ್ದರು. ಲಿಂಗಾಯತರಿಗೆ ಮಾತ್ರ ಮಾಧುಸ್ವಾಮಿ ಸೀಮಿತವಾಗಿದ್ದಾರೆ ಎಂದು ಹೇಳಿದ್ದರು. ಈಗ ಆ ಪುಣ್ಯಾತ್ಮರು ಕಾಣುತ್ತಿಲ್ಲ... ಇಂದು ನನ್ನ ಕೆಲಸ ನೋಡಿ ಏನು ಹೇಳುತ್ತಾರೆ? ಎಂದರು.
ತಿಮ್ಲಾಪುರ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಮಾತ್ರ ಹಿಂದುಳಿದವರ ಜಮೀನಿದೆ. ಉಳಿದೆಡೆ ಮೇಲ್ವರ್ಗದವರ ಜಮೀನಿದೆ. ಹಾಗಾಗಿ, ಹಿಂದುಳಿದವರಿಗೆ ನೆರವಾಗಲು ತಿಮ್ಲಾಪುರ ಕೆರೆಗೆ ಹೇಮಾವತಿ ನೀರು ಹರಿಸಲು ಹಠ ನಾನು ಮಾಡಿದ್ದೆ. ಈ ವರ್ಷ ತಿಮ್ಲಾಪುರ ಕೆರೆ ತುಂಬಿಸಿದ್ದೇನೆ. ಪಾಪ-ಪುಣ್ಯ ಗೊತ್ತಿರುವವರು ನಾನು ಜಾತಿವಾದಿಯೇ ಎಂದು ಯೋಚನೆ ಮಾಡಲಿ ಎಂದ ಮಾಧುಸ್ವಾಮಿ ವೇದಿಕೆಯಲ್ಲೇ ಭಾವುಕರಾದರು.
ಇತ್ತೀಚೆಗೆ ಜೆ.ಸಿ.ಪುರದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲೂ ಮಾಧುಸ್ವಾಮಿ ಭಾವುಕರಾಗಿದ್ದರು. ಇಂದು(ಶುಕ್ರವಾರ) ಮತ್ತೊಮ್ಮೆ ಭಾವುಕರಾಗಿಯೇ ಭಾಷಣ ಮಾಡಿದ್ದಾರೆ.