

ಉಡುಪಿ: 'ಲೋನ್ ಬಾಕಿ ಇದೆ ಎಂದು ನನ್ನ ಮೊಬೈಲ್ಗೆ ಕರೆ ಬಂದ್ರೆ ಸತ್ತು ಹೋದ ಅಂತೇಳಿ...' ಎಂದು ಡೆತ್ನೋಟ್ ಬರೆದಿಟ್ಟು ಯುವಕನೊಬ್ಬ ಮನೆ ಮುಂದೆ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ದುರ್ಘಟನೆ ಕುಂದಾಪುರದ ಹೆಮ್ಮಾಡಿಯಲ್ಲಿ ಸಂಭವಿಸಿದೆ. ವಿಘ್ನೇಶ್ ಮೃತ ದುರ್ದೈವಿ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ವಿಘ್ನೇಶ್, ಸ್ನೇಹಿತರ ಜತೆ ಬಿಜಿನೆಸ್ ಆರಂಭಿಸಲು ಸಾಲ ಮಾಡಿದ್ದ.
ಸಾಲ ಮರುಪಾವತಿ ಮಾಡಲಾಗದೆ ಆತಂಕಗೊಂಡಿದ್ದ ವಿಘ್ನೇಶ್, 'ಲೋನ್ ಬಾಕಿ ಇದೆ ಎಂದು ಕರೆ ಬಂದ್ರೆ ಅವನು ಯಾರೆಂದು ಗೊತ್ತಿಲ್ಲ ಅಂತೇಳಿ. ಅಥವಾ ನಾನು ಸತ್ತು ಹೋದೆ ಎಂದು ಹೇಳಿ. ಮೊಬೈಲ್ ಆ್ಯಪ್ನಲ್ಲಿ ನಾನು ಪಡೆದ ಸಾಲವನ್ನು ತೀರಿಸಲು ಆಗುತ್ತಿಲ್ಲ. ಅದಕ್ಕೆ ಸೂಸೈಡ್ ಮಾಡಿಕೊಳ್ಳುತ್ತಿರುವೆ. ನನ್ನ ಸಾವಿಗೆ ನಾನೇ ಕಾರಣ. ನಾನು ಕೆಲಸ ಮಾಡುವ ಕಂಪನಿಗೆ ನನ್ನ ಸಾವಿನ ಸುದ್ದಿ ತಿಳಿಸಿ. ಎಲ್ಲರಿಗೂ ಮೋಸ ಮಾಡಿ ಹೋಗುತ್ತಿರುವೆ ಕ್ಷಮಿಸಿ' ಎಂದು ಡೆತ್ನೋಟ್ನಲ್ಲಿ ಮನದ ನೋವನ್ನು ವಿವರಿಸಿದ್ದಾನೆ. ಡೆತ್ನೋಟ್ನಲ್ಲಿ ತನ್ನ ಎಟಿಎಂ ಪಾಸ್ವರ್ಡ್ ಅನ್ನೂ ನಮೂದಿಸಿದ್ದಾನೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.