ಬಸವನಗುಡಿ ನ್ಯಾಷನಲ್​ ಕಾಲೇಜಿನತ್ತ ಪಾದಯಾತ್ರೆ: ಸುರ್ಜೇವಾಲ ಭಾಗಿ, ಶಕ್ತಿ ಪ್ರದರ್ಶನಕ್ಕೆ ಕೈ ಪಡೆ ಸಜ್ಜು

mekedatu
Published on

ಬೆಂಗಳೂರು: ಮೇಕೆದಾಟು ಪಾದಯಾತ್ರೆ ನ್ಯಾಷನಲ್​ ಕಾಲೇಜಿನತ್ತ ಹೊರಟ್ಟಿದ್ದು, ಸಮಾರೋಪ ಸಮಾರಂಭಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲ ಆಗಮಿಸಿದ್ದಾರೆ.

ಮೆಜೆಸ್ಟಿಕ್ ಬಳಿ ಮೇಕೆದಾಟು ಪಾದಯಾತ್ರೆ ಸೇರಿಕೊಂಡ ರಣದೀಪ್ ಸಿಂಗ್ ಸರ್ಜೇವಾಲ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರ ಜತೆ ಹೆಜ್ಜೆ ಹಾಕುತ್ತಾ ಸಾಗಿದ್ದಾರೆ. ರಾಜ್ಯದ ಮೂಲೆಮೂಲೆಯಿಂದ ಕಾರ್ಯಕರ್ತರು ಪಾದಯಾತ್ರೆಗೆ ಆಗಮಿಸಿದ್ದು, ದಾರಿಯುದ್ದಕ್ಕೂ ಜನಬಲ ಪ್ರದರ್ಶನ ಅಬ್ಬರ ಜೋರಾಗಿದೆ.

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು ಸಂಜೆ ನಡೆಯುವ ಸಮಾವೇಶಕ್ಕೆ ಸಿದ್ಧತೆ ನಡೆದಿದ್ದು, ಸಂಸದ ಡಿ.ಕೆ.ಸುರೇಶ್​ ಕೊನೇ ಕ್ಷಣದ ಸಿದ್ಧತೆ ಪರಿಶೀಲನೆ ಮಾಡಿದ್ದಾರೆ. ಬೃಹತ್ ವೇದಿಕೆಯಲ್ಲಿ 150 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್​ನ ಹಿರಿಯ, ಕಿರಿಯ ನಾಯಕರಿಗೆ ವೇದಿಕೆಯಲ್ಲಿ ಆಸನ ಕಲ್ಪಿಸಲಾಗಿದೆ. ಕಾಲೇಜು ಮೈದಾನದಲ್ಲಿ 5 ಸಾವಿರ ಆಸನಗಳ ವ್ಯವಸ್ಥೆ ಮಾಡಿದ್ದು, ಫ್ಲೆಕ್ಸ್,​ ಬ್ಯಾನರ್​ಗಳು ರಾರಾಜಿಸುತ್ತಿವೆ.

ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಮಲ್ಲೇಶ್ವರಂ, ಶೇಶಾದ್ರಿಪುರಂ ಸರ್ಕಲ್​ ಸೇರಿದಂತೆ ದಾರುಯುದ್ದಕ್ಕೂ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಂಗಳೂರು ಜನರಿಗೆ ನೀರು ಬೇಕು ನಿಜ. ಆದ್ರೆ ವ್ಯವಸ್ಥಿತವಾಗಿ ಮಾಡಿ ಎಂದು ಸಾರ್ವಜನಿಕರು ಹೇಳುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net