More

    ಹರ್ಷನ ಅಕ್ಕನಿಗೆ ಬಿಜೆಪಿಯಿಂದ ಟಿಕೆಟ್ ಕೊಡಿ ಎಂದವರಿಗೆ ಗೃಹ ಸಚಿವ ಕೊಟ್ಟ ಟಾಂಗ್​ ಹೀಗಿದೆ…

    ತುಮಕೂರು: ಕಾಂಗ್ರೆಸ್​ನವರ ಕಾಲದಲ್ಲಿ ಸತ್ತವರಿಗೆಲ್ಲಾ ಟಿಕೆಟ್ ಕೊಟ್ಟಿದ್ದಾರಾ? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.

    ಶಿವಮೊಗ್ಗದಲ್ಲಿ ಹತ್ಯೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಸಾವಿಗೆ ನ್ಯಾಯ ಕೊಡಿಸಲು ಆತನ ಸಹೋದರಿ ಅಶ್ವಿನಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಬೇಕು. ಸಚಿವ ಕೆ.ಎಸ್​. ಈಶ್ವರಪ್ಪ ಅವರು ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಹರ್ಷನ ಕುಟುಂಬದ ಸದಸ್ಯರಿಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್‌ನಿಂದ ನಾವು ಅಭ್ಯರ್ಥಿಯನ್ನೇ ಹಾಕುವುದಿಲ್ಲ. ಹರ್ಷನ ಸಹೋದರಿಯನ್ನು ಕಣಕ್ಕೆ ಇಳಿಸಿದರೆ ಅವಿರೋಧವಾಗಿ ಆಯ್ಕೆ ಮಾಡಲು ಕಾಂಗ್ರೆಸ್ ಸಹಕಾರ ನೀಡಲಿದೆ ಎಂದು ಕಾಂಗ್ರೆಸ್​ ನಾಯಕ ಬಿ.ಕೆ.ಹರಿಪ್ರಸಾದ್​ ಸವಾಲು ಹಾಕಿದ್ದಾರೆ. ಈ ಕುರಿತು ತುಮಕೂರಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಕಾಂಗ್ರೆಸ್​ನವರ ಕಾಲದಲ್ಲಿ ಸತ್ತವರಿಗೆಲ್ಲಾ ಟಿಕೆಟ್ ಕೊಟ್ಟಿದ್ದಾರಾ? ಕಾಂಗ್ರೆಸ್ ಆಧಾರ ರಹಿತ ಟೀಕೆ ಮಾಡುತ್ತಿದೆ ಎಂದು ಕಿಡಿಕಾರಿದರು.

    ಹರ್ಷನ ಕುಟುಂಬಕ್ಕೆ ಎಲ್ಲ ರೀತಿಯ ಸಹಕಾರ ಕೊಡುತಿದ್ದೇವೆ. ಎಲ್ಲಕಿಂತ ಮುಖ್ಯವಾಗಿ ಹರ್ಷನ ತಾಯಿ ನನಗೆ ಹೇಳಿರುವಂತೆ, ಮಗನ ಪ್ರಾಣ ತಂದುಕೊಡುವಂತೆ ಅವರು ಕೇಳಿಲ್ಲ. ಅವನ ಸಾವು ಅರ್ಥಹೀನ ಆಗಬಾರದು, ವ್ಯರ್ಥ ಆಗಬಾರದು ಎಂದಿದ್ದಾರೆ. ಅವನು ಒಂದು ಉದ್ದೇಶಕ್ಕೋಸ್ಕರ ಸತ್ತಿದ್ದಾನೆ. ಅದಕ್ಕೆ ನ್ಯಾಯ ದೊರಕಿಸಿ ಕೊಡಿ ಎಂದು ಆ ತಾಯಿ ಕೇಳಿದ್ದಾರೆ. ಅದನ್ನ ನಾವು ಮಾಡುತ್ತಾ ಇದ್ದೇವೆ ಎಂದು ಗೃಹ ಸಚಿವರು ಹೇಳಿದರು.

    ಶಿವಮೊಗ್ಗ ಪೊಲೀಸರ ವಿರುದ್ಧದ ತನಿಖೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಎರಡೂ ಠಾಣೆಯ ವಿರುದ್ಧ ತನಿಖೆ ನಡೆಯುತ್ತಿದೆ. ಈ ಠಾಣೆಯಲ್ಲಿ ಆರೋಪಿಗಳ ವಿರುದ್ಧ 10-15 ಕೇಸ್ ಇದೆ. ಯಾಕೆ ಅದನ್ನು ಇಷ್ಟು ದಿನ ಬೆಳೆಸಿ ಇಟ್ಟುಕೊಂಡಿದ್ದರು. ನಮ್ಮ ಪೊಲೀಸರ ಕರ್ತವ್ಯದಲ್ಲಿ ಏನು ಎಡವಟ್ಟು ಆಗಿದೆ? ಸಮಾಜ ವಿದ್ರೋಹಿಗಳು ಬೆಳೆಯುವ ನಿಟ್ಟಿನಲ್ಲಿ ಪೊಲೀಸರ ಪಾತ್ರ ಏನಿದೆ? ಎಂಬುದನ್ನು ತಿಳಿಕೊಳ್ಳುವ ಅವಶ್ಯಕತೆ ಇದೆ. ಇಲಾಖೆ ವೈಫಲ್ಯತೆ, ಪೊಲೀಸರ ವೈಫಲ್ಯತೆ ಬಗ್ಗೆ ಜನ ಆರೋಪ ಮಾಡುತ್ತಾರೆ. ಹಾಗಂತ ಪೊಲೀಸರನ್ನು ನಾನು ಬಿಟ್ಟುಕೊಡುತಿದ್ದೇನೆ ಅಂತಲ್ಲ. ಅನ್ಯಾಯ ಯಾರೂ ಮಾಡಿದರೂ ಒಂದೇ. ಸಾಮಾನ್ಯ ಜನರಿಗೊಂದು, ಪೊಲೀಸರಿಗೊಂದು, ಗೃಹ ಸಚಿವರಿಗರೊಂದು ಕಾಯ್ದೆ ಅಲ್ಲ. ನಿನ್ನೆಯಿಂದ ಪೊಲೀಸರ ವಿರುದ್ಧ ತನಿಖೆ ಆರಂಭವಾಗಿದೆ. ಒಂದು ವಾರದಲ್ಲಿ ವರದಿ ನೀಡಲು ಹೇಳಿದ್ದೇನೆ ಎಂದರು.

    ಹರ್ಷನ ಅಕ್ಕನಿಗೆ ಬಿಜೆಪಿಯಿಂದ ಟಿಕೆಟ್ ಕೊಡಿ, ನಾವು ಕಾಂಗ್ರೆಸ್​ನಿಂದ ಅಭ್ಯರ್ಥಿಯನ್ನೇ ಹಾಕಲ್ಲ!

    ರಾಮನಗರದಲ್ಲಿ ಗಂಡಸ್ತನದ ಹೇಳಿಕೆ: ಮೇಕೆದಾಟು ಪಾದಯಾತ್ರೆಯಲ್ಲಿ ಟ್ವಿಸ್ಟ್​ ಕೊಟ್ಟ ಡಿ.ಕೆ.ಸುರೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts