

ಬೆಂಗಳೂರು: ಅಡೆತಡೆಗಳನ್ನು ದಾಟಿ ಬಂದ ಮೇಕೆದಾಟು ಪಾದಯಾತ್ರೆ ಗುರುವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂಪನ್ನಗೊಳ್ಳುತ್ತಿದ್ದು, ಈ ವೇಳೆ ಅಬ್ಬರಿಸಿ ಬೊಬ್ಬಿರಿಯುವ ಧಾವಂತದಲ್ಲಿ ಕಾಂಗ್ರೆಸ್ ಇದೆ. ಕೊನೇ ದಿನದ ಪಾದಯಾತ್ರೆಯು ಇಂದು ಬೆಳಗ್ಗೆ ಅರಮನೆ ಮೈದಾನದಿಂದ ಹೊರಟಿದೆ.
ರಾಮನಗರದ ಕಾರ್ಯಕ್ರಮದಲ್ಲಿ ಗಂಡಸ್ತನದ ಸವಾಲು ಹಾಕಿದ್ದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್ಗೆ ಎದಿರೇಟು ನೀಡಲು ಸಂಸದ ಡಿ.ಕೆ. ಸುರೇಶ್ ಪಾದಯಾತ್ರೆ ಮಾರ್ಗವನ್ನೇ ಬದಲಿಸಿದ್ದಾರೆ. ಗುರುವಾರ ಪಾದಯಾತ್ರೆಯನ್ನು ಮಲ್ಲೇಶ್ವರದಲ್ಲಿ ಹಾದುಹೋಗುವಂತೆ ನೋಡಿಕೊಂಡಿದ್ದಾರೆ. ಮಲ್ಲೇಶ್ವರದಲ್ಲಿ ಜನಬಲ ಪ್ರದರ್ಶನಕ್ಕೂ ಕಾಂಗ್ರೆಸ್ ತಯಾರಿ ನಡೆಸಿದೆ. ರಾಜ್ಯದ ಮೂಲೆಮೂಲೆಯಿಂದ ಕಾರ್ಯಕರ್ತರು ಪಾದಯಾತ್ರೆಗೆ ಆಗಮಿಸುತ್ತಿದ್ದು, ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು ಬೃಹತ್ ಸಮಾವೇಶದೊಂದಿಗೆ ಅಂತ್ಯವಾಗಲಿದೆ.
ಇಂದು ಎಲ್ಲೆಲ್ಲಿ?: ಕಾವೇರಿ ಚಿತ್ರಮಂದಿರದಿಂದ ಸ್ಯಾಂಕಿ ಕೆರೆ, 18ನೇ ಕ್ರಾಸ್ ಮಲ್ಲೇಶ್ವರ, ಮಾರ್ಗೊಸಾ ರಸ್ತೆ, ಕೆ.ಸಿ. ಜನರಲ್ ಆಸ್ಪತ್ರೆ, ಲಿಂಕ್ ರಸ್ತೆ, ಶೇಷಾದ್ರಿಪುರ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಕಾಟನ್ ಪೇಟೆ ಮುಖ್ಯರಸ್ತೆ, ಬ್ರಿಯಾಂಡ್ ವೃತ್ತ, ರಾಯನ್ ವೃತ್ತ, ಈದ್ಗಾ ಮೈದಾನ ತಲುಪಿ, ಸಂಜೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೇಕೆದಾಟು ಪಾದಯಾತ್ರೆ ಸಮಾಪನಗೊಳ್ಳಲಿದೆ.
ನ್ಯಾಷನಲ್ ಕಾಲೇಜಿನಲ್ಲಿ ಈ ಹೋರಾಟ ಮುಗಿದರೂ ಇದು ರಾಜ್ಯದಲ್ಲಿನ ಹೋರಾಟದಲ್ಲಿನ ಮೊದಲ ಭಾಗ ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.