

ನೆಲಮಂಗಲ: ಪತ್ನಿ ಮತ್ತು ಮಕ್ಕಳಿದ್ದರೂ ಮತ್ತೊಬ್ಬಳ ಸಹವಾಸಕ್ಕೆ ಬಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ, ಪ್ರೇಯಸಿಗೆ ಕೋಟ್ಯಂತರ ಮೌಲ್ಯದ ಬಂಗಲೆ, ಕಾರು, ನಿವೇಶನ, ಚಿನ್ನಾಭರಣ ಕೊಡಿಸಿದ್ದ. ಆಕೆಯೊಂದಿಗೆ ಅನೈತಿಕ ಸಂಬಂಧವನ್ನೂ ಇಟ್ಟುಕೊಂಡಿದ್ದ. ಕೈ ಹಿಡಿದ ಪತ್ನಿಗೆ ಈ ವಿಚಾರ ಗೊತ್ತಾಗಿ ಗಲಾಟೆ ಆಗುತ್ತಿದ್ದಂತೆ ಪ್ರೇಯಸಿಗೆ ತಾಳಿ ಕಟ್ಟಿ ಹೆಂಡತಿ ಮಕ್ಕಳನ್ನ ಬಿಟ್ಟು ಆಕೆಯೊಂದಿಗೇ ವಾಸವಿದ್ದ. ಕೊನೆಗೆ ಪ್ರೇಯಸಿಯಿಂದಲೇ ದುರಂತ ಅಂತ್ಯಕಂಡಿದ್ದಾನೆ.
ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ಹಾರೋಕ್ಯಾತನಹಳ್ಳಿ ನಿವಾಸಿ ಸ್ವಾಮಿರಾಜ್ (46) ಮೃತ ದುರ್ದೈವಿ. ಈತನ ಎರಡನೇ ಪತ್ನಿ ನೇತ್ರಾವತಿ (34) ಕೊಲೆ ಆರೋಪಿ. ಸ್ವಾಮಿರಾಜ್ ನಿತ್ಯ ಲೈಂಗಿಕ ಕಿರುಕುಳ ಕೊಡುತ್ತಿದ್ದ. ಬೇಡ ಅಂದ್ರೂ ಲೈಂಗಿಕ ಸಂಪರ್ಕ ಬೆಳೆಸುವಂತೆ ಪದೇಪದೆ ಹಿಂಸಿಸುತ್ತಿದ್ದನಂತೆ. ನ.6ರ ರಾತ್ರಿ ಸ್ವಾಮಿರಾಜು ಮದ್ಯಸೇವಿಸಿ ಮನೆಗೆ ಬಂದು ಲೈಂಗಿಕವಾಗಿ ಕಿರುಕುಳ ನೀಡಿದ್ದ. ಇದರಿಂದ ಬೇಸತ್ತು ಆತನ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಕೊಂದುಬಿಟ್ಟೆ ಎಂದು ನೇತ್ರಾವತಿಯೇ ಪೊಲೀಸರ ಬಂದು ಶರಣಾಗಿದ್ದಾಳೆ.
ಆಂಧ್ರಪ್ರದೇಶ ಮೂಲದ ಸ್ವಾಮಿರಾಜ್, 18 ವರ್ಷಗಳ ಹಿಂದೆ ಮೊದಲನೇ ವಿವಾಹವಾಗಿದ್ದ. 15 ವರ್ಷದಿಂದ ರಿಯಲ್ ಎಸ್ಟೆಟ್ ಉದ್ಯಮ ಮಾಡಿಕೊಂಡು ಬೆಂಗಳೂರಿನ ಅಂದ್ರಹಳ್ಳಿಯಲ್ಲಿ ವಾಸವಾಗಿದ್ದ. 10 ವರ್ಷಗಳ ಹಿಂದೆ ಬ್ಯೂಟಿಷಿಯನ್ ಕೆಲಸ ಮಾಡುತ್ತಿದ್ದ ನೇತ್ರಾವತಿಯ ಪರಿಚಯ ಸ್ವಾಮಿರಾಜ್ಗೆ ಆಗಿತ್ತು. ಇವರಿಬ್ಬರೂ ಅನ್ಯೂನ್ಯವಾಗಿದ್ದರು. 3 ವರ್ಷದ ಹಿಂದೆ ಸ್ವಾಮಿರಾಜ್ ಮತ್ತು ನೇತ್ರಾವತಿ ನಡುವಿನ ಅಕ್ರಮ ವಿಚಾರ ಮೊದಲ ಪತ್ನಿಗೆ ತಿಳಿದು ಮನೆಯಲ್ಲಿ ಜಗಳವಾಗಿತ್ತು. ಈ ವೇಳೆ ಸ್ವಾಮಿರಾಜು ಕುಟುಂಬ ತೊರೆದು ನೇತ್ರಾವತಿಯೊಂದಿಗೆ 2ನೇ ವಿವಾಹವಾಗಿದ್ದ. ಸ್ವಾಮಿರಾಜ್ನ ಮೊದಲ ಹೆಂಡತಿ ಹಾಗೂ ಇಬ್ಬರು ಮಕ್ಕಳು ತುಮಕೂರಿನಲ್ಲಿ ವಾಸವಿದ್ದಾರೆ.
ನ.6ರ ರಾತ್ರಿ 9 ಗಂಟೆಗೆ ಸ್ವಾಮಿರಾಜ್ ಮದ್ಯಸೇವಿಸಿ ಮನೆಗೆ ಬಂದು ನೇತ್ರಾವತಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದನಂತೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ಆರಂಭವಾಗಿದ್ದು, ಕೋಪದಿಂದ ರಾಡ್ನಿಂದ ಹಲ್ಲೆ ಮಾಡಿದೆ. ನಂತರ ಪ್ರಜ್ಞೆ ತಪ್ಪಿಬಿದ್ದಿದ್ದರು. ಬಳಿಕ ನಾನೇ ಅವರನ್ನು ಕೊಲೆ ಮಾಡಿದೆ ಎಂದು ನೇತ್ರಾವತಿ ಅಂದು ರಾತ್ರಿ 11 ಗಂಟೆ ಸುಮಾರಿಗೆ ಮಾದನಾಯಕನಹಳ್ಳಿ ಠಾಣೆಗೆ ಬಂದು ಶರಣಾಗಿದ್ದಳು.
ನೇತ್ರಾವತಿಗೆ ಸ್ವಾಮಿರಾಜ್ ಹಾರೋಕ್ಯಾತನಹಳ್ಳಿಯಲ್ಲಿ 6 ಕೋಟಿ ರೂ. ಮೌಲ್ಯದ ಬಂಗಲೆ, ಕಾರು, ಚಿನ್ನಾಭರಣ ನಿವೇಶನ ಸೇರಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ನೀಡಿದ್ದ.
ಮಗಳಿಂದ ದೂರು ದಾಖಲು: ಕುಟುಂಬವನ್ನು ತೊರೆದಿದ್ದ ನಮ್ಮ ತಂದೆ, ನಮ್ಮನ್ನು ಆಗಾಗ್ಗೆ ಬಂದು ಭೇಟಿ ಮಾಡುತ್ತಿದ್ದರು. ನ.6ರಂದು ನನಗೆ ಹೊಸ ಬೈಕ್ ಕೊಡಿಸಲು ಶೋ ರೂಂ ಬಳಿ ತೆರಳಿ ಬಣ್ಣ ಆಯ್ಕೆ ಮಾಡಿ ಬೈಕ್ನ ಫೋಟೋ ನನಗೆ ಕಳುಹಿಸಿದ್ದರು. ನಮ್ಮ ತಂದೆ, ನಮ್ಮನ್ನು ನೋಡಿಕೊಳ್ಳುತ್ತಿರುವುದು ನೇತ್ರಾವತಿಗೆ ಇಷ್ಟ ಇರಲಿಲ್ಲ. ನಮ್ಮ ವಿಚಾರವಾಗಿ ನೇತ್ರಾವತಿ ಸಾಕಷ್ಟು ಬಾರಿ ಮನೆಯಲ್ಲಿ ಜಗಳ ಮಾಡಿದ್ದು, ಈ ಬಗ್ಗೆ ತಂದೆ ನನ್ನ ಬಳಿ ಹೇಳಿಕೊಳ್ಳುತ್ತಿದ್ದರು. ನನಗೆ ಗಾಡಿ ಕೊಡಿಸುವ ವಿಚಾರ ತಿಳಿದು ಅಂದು ಸಂಜೆ ಮನೆಯಲ್ಲಿ ಗಲಾಟೆ ಮಾಡಿ ಕೋಪದಿಂದ ಕೊಲೆ ಮಾಡಿದ್ದಾಳೆ ಎಂದು ಸ್ವಾಮಿರಾಜ್ನ ಮಗಳು ವರ್ಷಿಣಿ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಆದರೆ, ನೇತ್ರಾವತಿಯ ನಡವಳಿಕೆ ಮೇಲೆ ಅನುಮಾನ ಮೂಡಿದ್ದು, ಸ್ವಾಮಿರಾಜ್ ಕೊನೆಗೆ ನಿಖರ ಕಾರಣ ಏನೆಂಬುದು ಪೊಲೀಸ್ ತನಿಖೆ ಬಳಿಕ ಬಯಲಾಗಲಿದೆ.