

ಹಾಸನ: ನಿರಂತರ ಮಳೆಯಿಂದಾಗಿ ಸಕಲೇಶಪುರ ತಾಲೂಕಿನ ಶಿರಾಡಿಘಾಟ್ನಲ್ಲಿ ಶುಕ್ರವಾರ ಮಣ್ಣು ಕುಸಿದಿದ್ದು, ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹಾಸನ-ಶಿರಾಡಿಘಾಟ್ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಹಾಸನ-ಶಿರಾಡಿಘಾಟ್ ಮಾರ್ಗದಲ್ಲಿ ತಕ್ಷಣದಿಂದ ವಾಹನ ಸಂಚಾರ ಬಂದ್ ಮಾಡಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಆದೇಶ ಹೊರಡಿಸಿದ್ದಾರೆ.
ಶಿರಾಡಿಘಾಟ್ ರಸ್ತೆ ಸಂಪೂರ್ಣ ಬಂದ್ ಆಗಿದೆ. ಮುಂದಿನ ಆದೇಶದವರೆಗೂ ಈ ಆದೇಶ ಅನ್ವಯವಾಗಲಿದ್ದು, ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಬೇಕು ಎಂದು ಎಸ್ಪಿ ಸೂಚಿಸಿದ್ದಾರೆ.
ಮುಂಗಾರು ಮಳೆ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನದಿಗಳಿಗೆ ಒಳಹರಿವು ಹೆಚ್ಚಾಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಗುಡ್ಡಕುಸಿತ, ರಸ್ತೆ ಹಾನಿ ಸಂಭವಿಸುತ್ತಲೇ ಇದೆ. ಇದೀಗ ಶಿರಾಡಿಘಾಟ್ನಲ್ಲೂ ಮಣ್ಣು ಕುಸಿದಿದ್ದು, ದುರಸ್ತಿ ಕಾರ್ಯ ಆಗಬೇಕಿದೆ.