

ಧಾರವಾಡ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಯಾವ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಸೆ.3ರಂದು ಹು-ಧಾ ಪಾಲಿಕೆಯ ಒಟ್ಟು 82 ವಾರ್ಡ್ಗಳಿಗೆ ಮತದಾನ ನಡೆದಿತ್ತು. ಇಂದು(ಸೆ.6) ಮತ ಎಣಿಕೆ ನಡೆದಿದ್ದು, ಫಲಿತಾಂಶ ಹೊರಬಿದ್ದಿದೆ. ಆರಂಭದಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಮುನ್ನಡೆ ಕಾಯ್ದುಕೊಂಡು ಬಂದವಾದರೂ ಅಂತಿಮವಾಗಿ ಎರಡಕ್ಕೂ ಬಹುಮತ ಸಿಗಲಿಲ್ಲ.
ಅತಂತ್ರ ಫಲಿತಾಂಶ ಬಂದಿದ್ದು, ಪಕ್ಷೇತರ ಅಭ್ಯರ್ಥಿಗಳೇ ಈಗ ನಿರ್ಣಾಯಕ. ಮೇಯರ್ ಆಗಲು 45 ಮತ ಬೇಕಿದೆ. ಆದರೆ, ಬಿಜೆಪಿ ಒಟ್ಟು 39 ವಾರ್ಡ್ಗಳಲ್ಲಿ ಗೆದ್ದಿದ್ದು, ಬಿಜೆಪಿ ಬಳಿ ಮೇಯರ್ ಆಯ್ಕೆಗೆ ವಿಶೇಷ ಮತದಾನದ ಹಕ್ಕು ಹೊಂದಿರುವ ಐವರು ಜನಪ್ರತಿನಿಧಿಗಳಿದ್ದಾರೆ. ಅಲ್ಲಿಗೆ ಬಿಜೆಪಿಗೆ ಒಟ್ಟು 44 ಸ್ಥಾನ ಸಿಕ್ಕಂತಾಗುತ್ತೆ. ಇನ್ನೂ ಒಬ್ಬರ ಅಗತ್ಯವಿದೆ.
ಇನ್ನು ಕಾಂಗ್ರೆಸ್ ಒಟ್ಟು 33 ವಾರ್ಡ್ಗಳಲ್ಲಿ ಗೆದ್ದಿದ್ದು, ಕಾಂಗ್ರೆಸ್ ಬಳಿ ಮೇಯರ್ ಆಯ್ಕೆಗೆ ವಿಶೇಷ ಮತದಾನದ ಹಕ್ಕು ಹೊಂದಿರುವ ಮೂವರು ಜನಪ್ರತಿನಿಧಿಗಳಿದ್ದಾರೆ. ಅಲ್ಲಿಗೆ ಕಾಂಗ್ರೆಸ್ ಗೆ ಒಟ್ಟು 36 ಸ್ಥಾನ ಸಿಕ್ಕಂತಾಗುತ್ತೆ. ಎಐಎಂಐಎಂ 3, ಪಕ್ಷೇತರ 6, ಜೆಡಿಎಸ್ ಗೆ 1 ವಾರ್ಡ್ನಲ್ಲಿ ಗೆಲುವಾಗಿದ್ದು, ಇವರು ಕಾಂಗ್ರೆಸ್ ಕೈ ಹಿಡಿದರೆ ಬಿಜೆಪಿಗೆ ಹಿನ್ನೆಡೆ ಆಗಲಿದೆ. ಬಿಜೆಪಿ ಪಾಲಿಗೂ ಒಂದು ಸ್ಥಾನವನ್ನ ತನ್ನತ್ತ ಸೆಳೆಯುವುದು ಕಷ್ಟವೇನಾಗಲ್ಲ. ಸದ್ಯ ಪಕ್ಷೇತರರ ಮೇಲೆ ನಿಂತಿದೆ ಮೇಯರ್ ಆಯ್ಕೆ.
ಹು-ಧಾ ಪಾಲಿಕೆ ಚುನಾವಣೆಯಲ್ಲಿ ಪಕ್ಷವಾರು ಗೆದ್ದ ಸ್ಥಾನ
ಬಿಜೆಪಿ- 39 ವಾರ್ಡ್ಗಳು
ಕಾಂಗ್ರೆಸ್- 33 ವಾರ್ಡ್ಗಳು
ಪಕ್ಷೇತರ- 6 ವಾರ್ಡ್ಗಳು
ಎಐಎಂಐಎಂ- 3 ವಾರ್ಡ್ಗಳು
ಜೆಡಿಎಸ್- 1 ವಾರ್ಡ್