

ಬೆಂಗಳೂರು: ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದ ದಿ. ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಬೆನ್ನಲ್ಲೇ ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ನಟ, ನಿದೇರ್ಶಕ, ನಿರ್ಮಾಪಕ ವಿ. ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಮೊದಲ ವರ್ಷದ ಘಟಿಕೋತ್ಸವ ಏ.11ರಂದು ನಡೆಯಲಿದೆ. ರಾಜ್ಯಪಾಲ ಥಾವರ್ ಗೆಹಲೋತ್ ಭಾಗವಹಿಸಲಿದ್ದಾರೆ. ಈ ಬಾರಿ ಚಲನಚಿತ್ರ ರಂಗದಲ್ಲಿನ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ಅನ್ನು ನಟ ರವಿಚಂದ್ರನ್, ಸಮಾಜ ಸೇವೆ ವಿಭಾಗದಲ್ಲಿ ಎಂ.ಆರ್. ಜೈಶಂಕರ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸತ್ಯನಾರಾಯಣ ಅವರಿಗೆ ನೀಡಲಾಗುವುದು ಎಂದು ವಿವಿ ಕುಲಪತಿ ಲಿಂಗರಾಜ ಗಾಂಧಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಬಾರಿ ಒಟ್ಟು 41,768 ವಿದ್ಯಾರ್ಥಿಗಳು ಪದವಿ ಸ್ವೀಕಾರ ಮಾಡಲಿದ್ದಾರೆ.