ಮದ್ವೆ ಸಂಭ್ರಮ ಬೆನ್ನಲ್ಲೇ ಸೂತಕ ಛಾಯೆ: ಪತ್ನಿ-ಮಗಳ ಜತೆ ಹೇಮಾವತಿ ನಾಲೆಗೆ ಹಾರಿ ಇಂಜಿನಿಯರ್ ಆತ್ಮಹತ್ಯೆ

sucide
Published on

ತುಮಕೂರು: ಇಂಜಿನಿಯರ್​ ಸೇರಿ ಒಂದೇ ಕುಟುಂಬದ ಮೂವರು ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟ್ ಮೂಲಕ ಹಾದುಹೋಗುವ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.

ಹೇಮಾವತಿ ನಾಲಾ ವಲಯ ಕಚೇರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಮೇಶ್(55), ಪತ್ನಿ ಮಮತಾ (45) ಮತ್ತು ಶುಭಾ(25) ಮೃತರು. ರಮೇಶ್​ ಕೆ.ಬಿ.ಕ್ರಾಸ್​ನಲ್ಲಿರುವ ಹೇಮಾವತಿ ಕಚೇರಿಯಲ್ಲಿ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತ್ನಿ ಮಮತಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದರು. ಕೆ.ಆರ್.ನಗರ ಮೂಲದ ರಮೇಶ್, ಪತ್ನಿ ಜತೆ ತುಮಕೂರು ನಗರದ ಮರಳೂರಿನಲ್ಲಿ ನೆಲೆಸಿದ್ದರು.

ಗುರುವಾರ ರಾತ್ರಿ ಮಾರುತಿ ಒಮ್ನಿ ಕಾರಿನಲ್ಲಿ ಬಂದ ಮೂವರೂ ಹೇಮಾವತಿ ನಾಲೆಗೆ ರಾತ್ರಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾರುತಿ ಒಮ್ನಿ ಕಾರನ್ನು ಎನ್​ಎಚ್ 206 ರಸ್ತೆಯಲ್ಲಿ ನಿಲ್ಲಿಸಿದ್ದರು. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ, ರಮೇಶ್​ ಪುತ್ರಿಗೆ ಒಂದು ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ಮದ್ವೆಯಾದ ಒಂದು ತಿಂಗಳಿಗೇ ಮಗಳನ್ನು ಅಳಿಯ ತೊರೆದಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಮನನೊಂದು ಒಂದೇ ಕುಟುಂಬದ ಮೂವರು ಸಾವಿನ ಮನೆಯ ಕದತಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಮೃತದೇಹಗಳನ್ನು ನಾಲೆಯಿಂದ ಹೊರ ತೆಗೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net