ಹೊನ್ನಾಳಿ ತಾಲೂಕಿನಲ್ಲಿ ಸಿಎಂ ಬೊಮ್ಮಾಯಿ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ

bommai
Published on

ದಾವಣಗೆರೆ: ಅ.16ರಂದು ಜಿಲ್ಲೆಗೆ ಆಗಮಿಸುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

'ಜಿಲ್ಲಾಡಳಿತದ ನಡೆ ಗ್ರಾಮದ ಕಡೆ' ಕಾರ್ಯಕ್ರಮದ ಹಿನ್ನೆಲೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಚಾಲನೆ ಸಿಗಲಿದೆ. ಅ.16ರ ಬೆಳಗ್ಗೆ ಸುರಹೊನ್ನೆ ಗ್ರಾಮದಿಂದ ಗ್ರಾಮ ವಾಸ್ತವ್ಯಕ್ಕೆ ಕಂದಾಯ ಸಚಿವ ಆರ್. ಅಶೋಕ್, ಸಂಸದ ಜಿ.ಎಂ.‌ ಸಿದ್ದೇಶ್ವರ್ ಅವರಿಂದ ಚಾಲನೆ ಸಿಗಲಿದೆ. ಮಧ್ಯಾಹ್ನ ಹೊನ್ನಾಳಿ ಹೆಲಿಪ್ಯಾಡ್‌ಗೆ ವಿಮಾನದಲ್ಲಿ ಬಂದಿಳಿಯುವ ಸಿಎಂ, ರಸ್ತೆ ಮಾರ್ಗವಾಗಿ ಕುಂದೂರು ಗ್ರಾಮಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಸಿಎಂ ಮತ್ತು ಕಂದಾಯ ಸಚಿವರನ್ನು ಎತ್ತಿನ ಗಾಡಿಯಲ್ಲಿ ಗ್ರಾಮಕ್ಕೆ ಬರಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಗ್ರಾಮ ವಾಸ್ತವ್ಯದ ಜತೆಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಿಎಂ ಮತ್ತು ಕಂದಾಯ ಸಚಿವವರು ಉದ್ಘಾಟಿಸಲಿದ್ದಾರೆ. ಅದೇ ಗ್ರಾಮದಲ್ಲಿ ರಾತ್ರಿ ವಾಸ್ತವ್ಯವಿದ್ದು, ಮರುದಿನ ಬೆಳಗ್ಗೆ ಗ್ರಾಮದ ಒಬ್ಬರ ಮನೆಗೆ ಅನಿರೀಕ್ಷಿತ ಭೇಟಿ ನೀಡಲಿದ್ದಾರೆ. ಅಲ್ಲೇ ಬೆಳಗಿನ ಉಪಹಾರ ಸೇವಿಸಲಿದ್ದಾರೆ. ನಂತರ ಸಿಎಂ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಕಾರ್ಯಕ್ರಮದ ರೂಪುರೇಷೆ ಬಗ್ಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.

ಸಿಎಂ ಗ್ರಾಮ ವಾಸ್ತವ್ಯದ ಹಿನ್ನೆಲೆ ಹೊನ್ನಾಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಭಾನುವಾರ ಪೂರ್ವಭಾವಿ ಸಭೆ ನಡೆಯಿತು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ವಿವಿಧ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net