ಕುಡಿವ ನೀರಿನ ಪೈಪ್​ನಲ್ಲಿ ಸತ್ತ ಮಹಿಳೆಯ ಕಾಲು ಪತ್ತೆ! ಬೆಂಗಳೂರು ಸಮೀಪ ಊರಿಗೆ ಊರೇ ತಲ್ಲಣ

water tank
Published on

ಚನ್ನಪಟ್ಟಣ: ರಾಜ್ಯ ರಾಜಧಾನಿ ಬೆಂಗಳೂರು ಸಮೀಪ ಕಾವೇರಿ ನೀರು ಸರಬರಾಜಿನ ಓವರ್​ಹೆಡ್ ಟ್ಯಾಂಕ್ ನೀರಿನ ಪೈಪ್​ನ್​ಲ್ಲಿ ಮಹಿಳೆಯೊಬ್ಬರ ಒಂದು ಕಾಲು ಪತ್ತೆಯಾಗಿದ್ದು, ಮೃತದೇಹದ ಉಳಿದ ಭಾಗಕ್ಕಾಗಿ ಹುಡುಕಾಟ ಮುಂದುವರಿದಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ನ್ಯಾಯಾಲಯ ಹಿಂಭಾಗವಿರುವ ಓವರ್​ಹೆಡ್ ಟ್ಯಾಂಕ್ ನೀರಿನ ಪೈಪ್​ನ​ಲ್ಲಿ ಕೊಳೆತ ಸ್ಥಿತಿಯಲ್ಲಿ ತೊಡೆಭಾಗದಿಂದ ಪಾದದವರೆಗೂ ಕಾಲು ಪತ್ತೆಯಾಗಿದೆ.

ಮಾರುತಿ ಬಡಾವಣೆ, ಕೋಟೆ, ಹಾಗೂ ಕುವೆಂಪು ನಗರಕ್ಕೆ ಕಾವೇರಿ ನೀರು ಪೂರೈಸುವ ಟ್ಯಾಂಕ್ ಇದಾಗಿದ್ದು, ಇದರ ವಾಲ್ವ್​ನಲ್ಲಿ ಶನಿವಾರ ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಮನುಷ್ಯನ ಕಾಲು ಪತ್ತೆಯಾಗಿತ್ತು. ಟ್ಯಾಂಕ್​ನ ಮೇಲ್ಭಾಗದಲ್ಲಿ ಮಹಿಳೆಯ ಬಟ್ಟೆ, ಚಪ್ಪಲಿ ಹಾಗೂ ಛತ್ರಿಯೊಂದು ಸಿಕ್ಕಿದ್ದು, ಕೆಲದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ವಾಲ್ವ್​ ಓಪನ್ ಮಾಡಿ ನೋಡಿದಾಗ ತೊಡೆಭಾಗದವರೆಗೂ ಒಂದು ಕಾಲು ಮಾತ್ರ ಸಿಕ್ಕಿದ್ದು, ಬೆಳಲ್ಲಿ ಕಾಲುಂಗರ ಕೂಡ ಇದೆ. ಮತ್ತೊಂದು ಕಾಲು, ಸೇರಿ ದೇಹದ ಉಳಿದ ಭಾಗ ಇ್ನಣೂ ಪತ್ತೆಯಾಗಿಲ್ಲ. ಯಾರೋ ಮಹಿಳೆಯನ್ನ ಕೊಲೆ ಮಾಡಿ ದೇಹ ತುಂಡರಿಸಿ ನೀರಿನ ಟ್ಯಾಂಕ್​ಗೆ ಹಾಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಹಲವು ದಿನಗಳಿಂದ ಈ ಟ್ಯಾಂಕ್​ನಿಂದ ಪೂರೈಕೆಯಾಗುತ್ತಿರುವ ನೀರು ದುರ್ನಾತದಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದ್ದರು. ಇದರೊಂದಿಗೆ ಟ್ಯಾಂಕ್​ನಿಂದ ನೀರು ಸಮರ್ಪಕವಾಗಿ ಹೊರಬಾರದಿದ್ದಾಗ, ಸಂಬಂಧಪಟ್ಟವರು ವಾಲ್ವ್ ಬಿಚ್ಚಿ ಪರಿಶೀಲಿಸಿದಾಗ ಪೈಪ್​ಲೈನ್​ನಲ್ಲಿ ಮೃತದೇಹದ ಕಾಲು ಪತ್ತೆಯಾಗಿತ್ತು.

ವಾಲ್ವ್​ನಲ್ಲಿ ಮೃತದೇಹದ ಕಾಲು ಹೊರತೆಗೆಯಲು ನಗರಸಭೆ, ಜಲಮಂಡಳಿ ಸಿಬ್ಬಂದಿ ಹರಸಾಹಸಪಟ್ಟರು. ಜೆಸಿಬಿ ಹಾಗೂ ಕಬ್ಬಿಣ ಕತ್ತರಿಸುವ ಯಂತ್ರದ ಸಹಾಯದಿಂದ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಶ್ರಮವಹಿಸಿ, ಮೃತದೇಹದ ಕಾಲಿನ ಭಾಗ ಹೊರತೆಗೆದರು. ಸ್ಥಳದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹೈರಣಾಗಿದ್ದರು.

ಪೈಪ್​ಲೈನ್​ಲ್ಲಿ ಮಹಿಳೆಯ ಕಾಲು ಪತ್ತೆಯಾಗಿರುವ ಪ್ರಕರಣ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಟ್ಯಾಂಕ್​ನಿಂದ ನೀರು ಸರಬರಾಜು ಮಾಡುವ ಪೈಪ್ ದೊಡ್ಡದಾಗಿದ್ದು, ಅಲ್ಲಿಂದ ಶವದ ಒಂದು ಭಾಗ ವಾಲ್ವ್ ಬಳಿ ಸಿಕ್ಕಿಹಾಕಿಕೊಂಡಿದೆ ಎನ್ನಲಾಗಿದೆ. ಆದರೆ, ದೇಹದ ಉಳಿದ ಭಾಗ ಎಲ್ಲಿ ಎಂಬುದು ಪ್ರಶ್ನೆಯಾಗಿದೆ. ನಗರ ಪೊಲೀಸರು, ನಗರಸಭಾ ಹಾಗೂ ಜಲಮಂಡಳಿ ಸಿಬ್ಬಂದಿ ಬಾಕಿ ಉಳಿದಿರುವ ಶವವನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಫೈಪ್​ನ ಮುಂದಿನ ಭಾಗವನ್ನು ಕತ್ತರಿಸಬೇಕಾಗಿರುವ ಕಾರಣ ಕಾರ್ಯಾಚರಣೆ ನಿಧಾನವಾಗಿದೆ.

ಸಾರ್ವಜನಿಕರ ಆಕ್ರೋಶ: ಟ್ಯಾಂಕ್​ನಿಂದ ಸರಬರಾಜಾಗುವ ನೀರಿನಲ್ಲಿ ವಾಸನೆ ಬರುತ್ತಿದೆ ಎಂದು ಸಂಬಂಧಪಟ್ಟವರ ಗಮನಕ್ಕೆ ತಂದರೂ ಗಮನಹರಿಸಲಿಲ್ಲ. ನೀರಿಗೆ ಮೃತದೇಹ ಬಿದ್ದು ಹಲವು ದಿನಗಳು ಕಳೆದಿದ್ದು, ನೂರಾರು ಮನೆಗಳಿಗೆ ನೀರು ಸರಬರಾಜಾಗಿದೆ. ಅಲ್ಲದೆ ಟ್ಯಾಂಕ್​ನ ಮೇಲ್ಭಾಗಕ್ಕೆ ಬೀಗ ಹಾಕದೇ ಬೇಜವಾಬ್ದಾರಿತನ ತೋರಲಾಗಿದೆ. ಈ ಘಟನೆಗೆ ಕಾವೇರಿ ನೀರು ಸರಬರಾಜು ಮಂಡಳಿ ಹಾಗೂ ನಗರಸಭೆಯೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಗ್ಗೆ ಸಾಕಷ್ಟು ಗೊಂದಲವಿದೆ. ಮೃತದೇಹದ ಕಾಲು ಮಾತ್ರ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆಯ ನಂತರ, ಇದು ಕೊಲೆಯೋ ಅಲ್ಲವೋ ಎಂಬುದು ಗೊತ್ತಾಗಲಿದೆ. ನಿರ್ಲಕ್ಷ್ಯವಹಿಸಿರುವುದು ಕಂಡುಬಂದಿದ್ದು, ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುವುದು. ಜನತೆಗೆ ನೀರಿನ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುವುದು. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ತಹಸೀಲ್ದಾರ್ ಎಲ್.ನಾಗೇಶ್ ತಿಳಿಸಿದ್ದಾರೆ.

ನೀರಿನ ಟ್ಯಾಂಕ್ ಪೈಪ್​ನಲ್ಲಿ ಮಹಿಳೆಯ ಕಾಲು ಪತ್ತೆಯಾಗಿರುವ ಸುದ್ದಿ ತಿಳಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿದ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕೂಡಲೇ ಟ್ಯಾಂಕರ್​ಗಳ ಮೂಲಕ ನೀರು ಸರಬರಾಜು ಮಾಡುವಂತೆ ತಾಕೀತು ಮಾಡಿದ್ದಾರೆ. ಟ್ಯಾಂಕ್ ಸ್ವಚ್ಛಗೊಳಿಸಿದ ಬಳಿಕ ಅಧಿಕೃತವಾಗಿ ತಿಳಿಸುವವರೆಗೆ ಯಾರೂ ನೀರನ್ನು ಬಳಸಬಾರದು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net