

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಸಂಘ, ಸಂಘಟನೆ ಬೆಳೆಯಬೇಕಾದರೆ ಸಮಾನ ಮನಸ್ಕರ ಅವಶ್ಯಕತೆ ಇದೆ. ನಾವು ಒಳ್ಳೆಯ ಕೆಲಸ ಮಾಡಿದಾಗ ಪರಮಾತ್ಮನ ಸೇವೆ ಮಾಡಿದಂತಾಗುವುದು. ಮನುಷ್ಯ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ನಿತ್ಯ ಸ್ಮರಣೆ ಮಾಡುತ್ತಾರೆ ಎಂದು ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೋಟೇಶ್ವರದ ಪ್ರಾಂಶುಪಾಲ ಪ್ರೊ.ಕೆ.ರಾಮರಾಯ ಆಚಾರ್ಯ ಹೇಳಿದರು.
ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ, ಕೋಟೇಶ್ವರ ಶ್ರೀ ದೇವಿ ಮಹಿಳಾ ಮಂಡಳಿ ಸಹಯೋಗದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವದ ಅಂಗವಾಗಿ ಕೋಟೇಶ್ವರ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಮಂಗಳವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಿರಿಯ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ, ಪುರೋಹಿತ ರೋಹಿತಾಕ್ಷ ಆಚಾರ್ಯ, ಕುಂಭಾಶಿ ಮತ್ತು ಕೋಟೇಶ್ವರ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ ಅಧ್ಯಕ್ಷ, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಮಾತನಾಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಎಸ್.ಸುಬ್ರಹ್ಮಣ್ಯ ಆಚಾರ್ಯ ಕುಂಭಾಸಿ, ಭರತನಾಟ್ಯ ಕಲಾವಿದೆ ಪ್ರಣಮ್ಯಾ ಆಚಾರ್ಯ ಅರಸರಬೆಟ್ಟು ಅವರನ್ನು ಸನ್ಮಾನಿಸಲಾಯಿತು.
ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ ಅಧ್ಯಕ್ಷ ಚಂದ್ರಯ್ಯ ಆಚಾರ್ಯ ತೆಕ್ಕಟ್ಟೆ, ಗೌರವಾಧ್ಯಕ್ಷ ಸುರೇಶ ಆಚಾರ್ಯ ಸಾಂತಾವರ, ಕೋಟೇಶ್ವರ ಶ್ರೀ ದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಗೋಪಾಲ ಆಚಾರ್ಯ ತೆಕ್ಕಟ್ಟೆ, ಕಾರ್ಯದರ್ಶಿ ಸತೀಶ್ ಆಚಾರ್ಯ ಕುಂಬ್ರಿ ಮತ್ತಿತರರು ಉಪಸ್ಥಿತರಿದ್ದರು. ಸತೀಶ್ ಅಚಾರ್ಯ ಸ್ವಾಗತಿಸಿದರು. ವಿನೇಂದ್ರ ಆಚಾರ್ಯ ಕುಂಭಾಶಿ ಸಹಕರಿಸಿದರು. ಗಣೇಶ್ ಆಚಾರ್ಯ ಕುಂಬ್ರಿ ಕಾರ್ಯಕ್ರಮ ನಿರ್ವಹಿಸಿದರು. ಯೋಗಿರಾಜ್ ಆಚಾರ್ಯ ಬೇಳೂರು ವಂದಿಸಿದರು.