

ಉಡುಪಿ: ಜಾತಿಯ ಕತ್ತಲು ಹೋಗಬೇಕಾದರೆ ಧರ್ಮದ ಬೆಳಕು ಬೇಕು. ಕಲ್ಯಾಣದ ಕ್ರಾಂತಿಯೂ ಇದೇ ಉದ್ದೇಶದಿಂದ ಹುಟ್ಟಿಕೊಂಡಿದೆ. ವಚನ ಸಾಹಿತ್ಯವೇ ನಮ್ಮ ಧರ್ಮಗ್ರಂಥ. ಬಸವಣ್ಣನವರೇ ಧರ್ಮಗುರು. ಹೀಗಾಗಿ ಲಿಂಗಾಯತ ಪರಿಪೂರ್ಣ ಧರ್ಮ. ಇದು ಸ್ವತಂತ್ರ ಧರ್ಮವಾಗಿದೆ ಎಂದು ಬಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದದೇವರು ಹೇಳಿದರು.
ಲಿಂಗಾಯತ ಒಕ್ಕೂಟ ವತಿಯಿಂದ ಬಸವ ಸಂಸತಿ ಅಭಿಯಾನ ಅಂಗವಾಗಿ ನಡೆದ ವಚನ ಸಂವಾದದಲ್ಲಿ ಅವರು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ಬಸವಣ್ಣನವರ ಕಾಲದಲ್ಲಿ ಅನೇಕ ಮಂದಿ ಲಿಂಗದೀೆ ಸ್ವೀಕರಿಸಿದರು. ಅವರಲ್ಲಿ ವೀರಶೈವರೂ ಇದ್ದರು. ವಚನ ಸಾಹಿತ್ಯವನ್ನು ಧರ್ಮಗ್ರಂಥ ಮತ್ತು ಬಸವಣ್ಣ ಅವರನ್ನು ಧರ್ಮಗರು ಎಂಬುದಾಗಿ ಒಪ್ಪಿದರೆ ಅವರೂ ನಮ್ಮವರಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಬಸವತತ್ವದ ಮೂಲ ಉದ್ದೇಶ ಸಮ ಸಮಾಜ ನಿರ್ಮಾಣ. ಗುರು ಶಿಷ್ಯ ಸಂವಾದಕ್ಕೆ ಒತ್ತು ನೀಡಿದ್ದಾರೆ. ಕಾಯಕವೆಂದರೆ ದುಡಿದು ತಂದು ತಿನ್ನುವುದು. ಇದು ಪವಿತ್ರವಾಗುರಬೇಕು. ಪ್ರಾಮಾಣಿಕವಾಗಿ ಸಂಪಾದಿಸಬೇಕು. ದಾನ ಮತ್ತು ದಾಸೋಹ ಕಲ್ಪನೆ ವಿಭಿನ್ನವಾಗಿದೆ. ದಾನದಲ್ಲಿ ನೀಡುವವ ಶ್ರೇಷ್ಠ ಮತ್ತು ತೆಗೆದುಕೊಳ್ಳುವವನು ಕನಿಷ್ಠವೆಂಬ ಭಾವನೆ ಇದೆ. ಆದರೆ ದಾಸೋಹದಲ್ಲಿ ದಾನ ಪಡೆಯುವವ ಶಿವಸ್ವರೂಪಿ ಎಂದು ಹೇಳಿದರು.
ಬೆಳಗಾವಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಶಿವಪಥವೇ ಗುರು ಪಥವು ಎಂಬುದಾಗಿ ಗುರುವಿಗೆ ಮೊದಲ ಸ್ಥಾನ ಕಲ್ಪಿಸಿದ್ದಾರೆ. ಬ್ರೀಟಿಷರು ದೇಶದ ಶಿಕ್ಷಣ ಪದ್ಧತಿಯನ್ನು ಹಾಳುಗೆಡುವುದಕ್ಕೋಸ್ಕರ ಇಂಗ್ಲಿಷ್ ಕಲಿಯವರು ಜಾಣರು. ಉಳಿದವರು ದಡ್ಡರು ಎಂಬ ಭಾವನೆಯನ್ನು ಬಿತ್ತಿದರು. 10 ವರ್ಷದ ಹಿಂದೆ ಮಕ್ಕಳು ಆತ್ಮಹತ್ಯೆ, ಕೊಲೆ, ಸುಲಿಗೆ ಮಾಡುವ ಪ್ರವೃತ್ತಿ ಈ ಮಟ್ಟಿಗೆ ಇರಲಿಲ್ಲ. 2015ರಲ್ಲಿ ಶೇ. 33ರಷ್ಟಿದ್ದ ಮಕ್ಕಳ ಅಪರಾಧ ಪ್ರಕರಣ 2025ಕ್ಕೆ ಶೇ.53ಕ್ಕೆ ಏರಿಕೆಯಾಗಿದೆ. ಇದನ್ನು ಗಮನಿಸಿದರೆ ಶಿಕ್ಷಣ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಉತ್ತಮ ಚಿಂತನೆಯನ್ನು ಬೆಳೆಸಿಲ್ಲ ಎಂಬುದು ಅರಿವಾಗುತ್ತದೆ. ಸಮಾಜದಲ್ಲಿ ವಿವೇಚನೆ ಮತ್ತು ವಿಶ್ವಾಸ ಬಲಗೊಳಿಸುವ ನಿಟ್ಟಿನಲ್ಲಿ ಬಸವ ಸಂಸತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಹುಲಸೂರು ಶ್ರೀ ಶಿವಾನಂದ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ, ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಕೌಜಲಗಿ ಶ್ರೀ ವೀರ ಸಿದ್ಧದೇವರು, ರಾಯಚೂರು ಶ್ರೀ ವೀರಭದ್ರ ಶಾಸ್ತ್ರಿಗಳು, ಬೆಳಗಾವಿ ಶಿವಬಸವ ದೇವರು, ಬಸವಕಲ್ಯಾಣ ಬಸವರಾಜ ದೇವರು, ಮಮ್ಮಿಗಟ್ಟಿ ಬಸವಾನಂದ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಿರಂಜನ ಸಿ. ಸ್ವಾಗತಿಸಿದರು. ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಚಂದ್ರಶೇಖರ್ ವಂದಿಸಿದರು. ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಸ್ಮಾರಕದಿಂದ ಪುರಭವನದವರೆಗೆ ಸಾಮರಸ್ಯ ನಡಿಗೆ ಮೆರವಣಿಗೆ ನಡೆಯಿತು.