

ಹನೂರು: ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಗ್ರಾಮ ಪಾಲಾರ್‌ನಲ್ಲಿ ಬುಧವಾರ ಮನೆ ನಿರ್ಮಾಣ ಸಂಬಂಧ ಗಿರಿಜನರಿಂದ ಲಂಚ ಪಡೆಯುತ್ತಿದ್ದ ವೇಳೆಯೇ ಉಪ ವಲಯ ಅರಣ್ಯಾಧಿಕಾರಿಯೊಬ್ಬರೂ ಲೋಕಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಪಾಲಾರ್ ವನ್ಯಜೀವಿ ವಲಯದ ಭೋಜಪ್ಪ ಎಂಬುವರೇ ಲೋಕಯುಕ್ತರಿಗೆ ಸಿಕ್ಕಿ ಬಿದ್ದ ಉಪವಲಯ ಅರಣ್ಯಾಧಿಕಾರಿ.
ಪಾಲಾರ್‌ನಲ್ಲಿ ವಾಸಿಸುತ್ತಿರುವ ಗಿರಿಜನರಿಗೆ ಸರ್ಕಾರದಿಂದ 15 ಮನೆಗಳು ಮಂಜೂರಾಗಿತ್ತು. ಆದರೆ ಮನೆ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಡ್ಡಿ ಪಡಿಸಿದ್ದರು. ಡಿಆರ್‌ಎಫ್‌ಒ ಭೋಜಪ್ಪ 15 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಗ್ರಾಮದ ಮುರುಗೇಶ್ ಎಂಬವರು ಚಾಮರಾಜನಗರ ಜಿಲ್ಲಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ದಾಳಿ ನಡೆಸಿದ ಅಧಿಕಾರಿಗಳು ಭೋಜಪ್ಪ ಗಿರಿಜನರಿಂದ ಲಂಚ ಪಡೆಯುವ ವೇಳೆಯೇ ಸಿಕ್ಕಿ ಬಿದ್ದಿದ್ದು, ವಶಕ್ಕೆ ಪಡೆದಿದ್ದಾರೆ.