

ನವದೆಹಲಿ: ಭಿಕ್ಷಾಟನೆಗಳನ್ನು ನಿಷೇಧಿಸುವ ಸರ್ಕಾರಗಳು ಭಿಕ್ಷುಕರನ್ನು ಅದರಿಂದ ಹೊರತರುವ ದಾರಿಯನ್ನು ಕಂಡುಕೊಂಡಿಲ್ಲ. ಇನ್ನು ಭಿಕ್ಷುಕರನ್ನು ಕಂಡಕೂಡಲೇ ಜನರಲ್ಲಿ ಅಯ್ಯೋ ಪಾಪ ಅನ್ನೋ ಭಾವನೆ ಮೂಡುತ್ತದೆಯೇ ಹೊರತು ಅವರ ಪರವಾಗಿ ಎಂದೂ ಧ್ವನಿ ಎತ್ತುವುದಿಲ್ಲ. ಕೆಲವರಂತೂ ಭಿಕ್ಷುಕರನ್ನು ತುಂಬಾ ಕೀಳಾಗಿ ನೋಡುತ್ತಾರೆ. ಯಾರು ಕೂಡ ಭಿಕ್ಷುಕರಾಗಬೇಕೆಂದು ಬಯಸುವುದಿಲ್ಲ. ಜೀವನದಲ್ಲಿ ಎದುರಾಗುವ ಕೆಲ ಪರಿಸ್ಥಿತಿಗಳಿಂದ ಕೆಲವರು ಭಿಕ್ಷಾಟನೆ ದಾರಿಯನ್ನು ತುಳಿಯುತ್ತಾರೆ. ಆದರೆ, ಮನಸ್ಸು ಮಾಡಿದರೆ ಭಿಕ್ಷುಕರಿಗೂ ಒಂದು ಜೀವನವನ್ನು ಕಟ್ಟಿಕೊಡಬಹುದು ಎನ್ನುವುದಕ್ಕೆ ಚಂದ್ರ ಮಿಶ್ರಾ ಎಂಬುವರು ಜ್ವಲಂತ ಉದಾಹರಣೆಯಾಗಿದ್ದಾರೆ.
ಅಂದಹಾಗೆ ಚಂದ್ರ ಮಿಶ್ರಾ ಅವರು ಒಡಿಶಾದ ಸಾಮಾಜಿಕ ಕಾರ್ಯಕರ್ತ. ಅಲ್ಲದೆ, ಮಾಜಿ ಪತ್ರಕರ್ತ ಕೂಡ ಹೌದು. ಉದ್ಯೋಗ ನೀತಿಗಳ ಸಂಬಂಧ ವಿವಿಧ ರಾಜ್ಯ ಸರ್ಕಾರಗಳೊಂದಿಗೂ ಕೆಲಸ ಮಾಡಿರುವ ಅನುಭವ ಇದೆ. ತಮ್ಮದೇಯಾದ ಒಂದು ವಿಶಿಷ್ಟ ಪರಿಕಲ್ಪನೆ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಅದೇ ಭಿಕ್ಷುಕರ ನಿಗಮ. ಇದರ ಘೋಷವಾಕ್ಯವೆಂದರೆ ‘ದಾನ ಮಾಡಬೇಡಿ, ಹೂಡಿಕೆ ಮಾಡಿ ಎಂಬುದು. ಈ ನಿಗಮದ ಮೂಲಕ ಚಂದ್ರ ಅವರು ಅನೇಕ ಭಿಕ್ಷುಕ ಕುಟುಂಬಗಳ ಜೀವನವನ್ನು ಬದಲಾಯಿಸಿದ್ದಾರೆ. ಚಂದ್ರ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಿಕ್ಷುಕರ ನಿಗಮವನ್ನು ತೆರೆದಿದ್ದು, ಇದರ ಮೂಲಕ ಭಿಕ್ಷುಕರನ್ನು ಉದ್ಯಮಿಗಳನ್ನಾಗಿ ಪರಿವರ್ತಿಸುತ್ತಿದ್ದಾರೆ.
ಕೋವಿಡ್ನಿಂದ ಕೆಲಸ ಕಳೆದುಕೊಂಡವರ ಸಮೀಕ್ಷೆ ಮಾಡಲು 2020ರಲ್ಲಿ ಚಂದ್ರ ಅವರು ವಾರಣಾಸಿಗೆ ಬಂದಿದ್ದರು. ಈ ವೇಳೆ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ಚಂದ್ರ ಅವರು ಅದೇ ವರ್ಷದ ಕೊನೆಯಲ್ಲಿ ಒಂದು ದೀರ್ಘಯೋಜನೆಯೊಂದಿಗೆ ವಾರಣಾಸಿಗೆ ಮರಳಿದರು. ಇಲ್ಲಿನ ಅನೇಕ ಘಾಟ್ಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಮಕ್ಕಳಿಗಾಗಿ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿ ಚಂದ್ರ ಅವರು ಶಾಲೆಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಇದು ಅಂತಿಮವಾಗಿ ಭಿಕ್ಷುಕರ ಮಕ್ಕಳಿಗಾಗಿ 'ಸ್ಕೂಲ್ ಆಫ್ ಲೈಫ್' ಆಗಿ ವಿಕಸನಗೊಂಡಿತು. ಅಲ್ಲದೆ, ಮೂವರು ಸ್ನೇಹಿತರು ಸೇರಿ ಭಿಕ್ಷುಕರ ನಿಗಮದ ಕಲ್ಪನೆಯನ್ನು ಮುಂದಿಟ್ಟರು.
ಚಂದ್ರ ಅವರು ವಾರಣಾಸಿಯಲ್ಲಿ ಭಿಕ್ಷುಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಸ್ಥಳೀಯ ಎನ್‌ಜಿಒ ಜತೆ ಪಾಲುದಾರಿಕೆ ಹೊಂದಿದ್ದರು. ಆರಂಭದಲ್ಲಿ ಈ ನಿಗಮದತ್ತ ಯಾರೂ ಆಸಕ್ತಿ ತೋರಲಿಲ್ಲ. ಆದರೆ, ಕರೊನಾ ಮಹಾಮಾರಿ ವಕ್ಕರಿಸಿದ ಬಳಿಕ ದೇಶದಲ್ಲಿ ಹೇರಲಾದ ಲಾಕ್‌ಡೌನ್ ಸಮಯದಲ್ಲಿ ವಾರಣಾಸಿಯಲ್ಲಿ ಯಾತ್ರಿಕರ ಸಂಖ್ಯೆ ಕ್ಷೀಣಿಸಿತು. ಇದರಿಂದ ಭಿಕ್ಷುಕರಿಗೂ ತುಂಬಾ ಕಷ್ಟವಾಯಿತು. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಯಿತು. ಈ ಸಂದರ್ಭದಲ್ಲಿ ಅನೇಕ ಭಿಕ್ಷುಕರು ಚಂದ್ರ ಅವರನ್ನು ಸಂಪರ್ಕಿಸಿದರು. ಅವರಲ್ಲಿ ರಜನಿ ಎಂಬುವರು ಕೂಡ ಒಬ್ಬರು. ಚಂದ್ರ ಅವರು ರಜಿನಿಗೆ ಬ್ಯಾಗ್ಗಳನ್ನು ತಯಾರು ಮಾಡುವ ತರಬೇತಿಯನ್ನು ನೀಡಲು ಪ್ರಾರಂಭಿಸಿದರು.
ಕಲಿಯುವಲ್ಲಿ ತುಂಬಾ ಆಸಕ್ತಿ ಹೊಂದಿದ್ದ ರಜಿನಿ, ಬ್ಯಾಗ್ ತಯಾರಿಸುವುದನ್ನು ಬೇಗ ಕಲಿತುಕೊಂಡರು. ಇದರಲ್ಲಿ ರಜನಿ ಅವರ ಶ್ರಮ ತುಂಬಾ ಇತ್ತು. ಶ್ರಮ ಫಲ ಕೊಡಲು ಆರಂಭಿಸಿದ ಬಳಿಕ ರಜಿನಿ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಅವರ ಜೀವನದಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸಲು ಆರಂಭವಾಯಿತು. ಭಿಕ್ಷುಕಳಾಗಿದ್ದ ರಜಿನಿ, ಕೆಲಸಗಾರಳಾಗಿ ಬದಲಾದರು ಎಂದು ಚಂದ್ರ ಅವರು ಹೇಳಿದ್ದಾರೆ.
ತಾನು ಯಶಸ್ಸು ಸಾಧಿಸಿದ ಬಳಿಕ ರಜಿನಿ ಅವರು ಇತರ 12 ಜನರನ್ನು ನಿಗಮಕ್ಕೆ ಕರೆತಂದರು. ಚಂದ್ರ ಮತ್ತು ಅವರ ಪಾಲುದಾರರಾದ ಬದ್ರಿನಾಥ್ ಮಿಶ್ರಾ ಮತ್ತು ದೇವೇಂದ್ರ ಥಾಪಾ ಅವರು 2022ರ ಆಗಸ್ಟ್ ತಿಂಗಳಲ್ಲಿ ಭಿಕ್ಷುಕರ ನಿಗಮವನ್ನು ಲಾಭರಹಿತ ಕಂಪನಿಯಾಗಿ ನೋಂದಾಯಿಸಿದರು. ಇದಾದ ಬಳಿಕ ಶೀಘ್ರದಲ್ಲೇ, 'ಬ್ಯಾಗ್‌ಫುಲ್ ಆಫ್ ಡ್ರೀಮ್ಸ್' ಎಂಬ ಅವರ ಮೊದಲ ಉತ್ಪನ್ನವನ್ನು ಪ್ರಾರಂಭಿಸಿದರು. ಇದು ಯಶಸ್ವಿಯೂ ಆಯಿತು. ಇದಾದ ಸ್ವಲ್ಪ ಸಮಯದ ನಂತರ 'ಎನ್ಚಾಂಟೆಡ್ ಶರ್ಟ್' ಎಂದು ಕರೆಯಲ್ಪಡುವ ಮತ್ತೊಂದು ಬ್ರ್ಯಾಂಡ್ ಆರಂಭಿಸಿದರು. ಇದು ಮರುಬಳಕೆಯ ಬನಾರಸಿ ರೇಷ್ಮೆ ಮತ್ತು ಹತ್ತಿ ತ್ಯಾಜ್ಯದಿಂದ ಮಾಡಿದ ಪ್ಯಾಚ್ವರ್ಕ್ ಉಡುಪುಗಳನ್ನು ಒಳಗೊಂಡಿದೆ.
ಇದಿಷ್ಟೇ ಅಲ್ಲದೆ, ಸ್ಟೋಲ್‌ಗಳು, ಕರ್ಟನ್‌ಗಳು, ವಾಲ್ ಹ್ಯಾಂಗಿಂಗ್‌ಗಳು, ಕುಶನ್ ಸೆಟ್‌ಗಳು ಮತ್ತು ಶೀಟ್‌ಗಳನ್ನು ತಯಾರಿಸಲಾಯಿತು. ಮೊದಲ ವರ್ಷದಲ್ಲಿ ವಿವಿಧ ಜನರಿಂದ ಪಡೆದ 5.7 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಪ್ರಾರಂಭಿಸಿ, ಪ್ರಯತ್ನವು ಕ್ರಮೇಣ ಬೆಳೆಯುತ್ತಾ ಹೋಯಿತು. ತಮ್ಮಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಕೂಡ ಭಿಕ್ಷುಕರು ಹಿಂದಿರುಗಿಸಿದ್ದಾರೆ ಎನ್ನುತ್ತಾರೆ ಚಂದ್ರ. ಇದೀಗ ನಿಗಮದ ಭಾಷೆಯಲ್ಲಿ ಅವರನ್ನು ಉದ್ಯಮಿಗಳಾಗಿ ಬದಲಾದ ಭಿಕ್ಷುಕರು ಎಂದು ಕರೆಯಲಾಗುತ್ತದೆ.
2023-24 ರಲ್ಲಿ ವಿಸ್ತಾರಗೊಂಡ ಸಂಸ್ಥೆಯು 50 ಭಿಕ್ಷುಕ ಕುಟುಂಬಗಳಿಗೆ ಆಸರೆಯಾಗಿದೆ. 2024ರ ವೇಳೆಗೆ 2,000 ಕ್ಕೂ ಹೆಚ್ಚು ಜನರು ನಿಗಮದೊಂದಿಗೆ ಸಂಬಂಧ ಹೊಂದಿದ್ದಾರೆ. ಈ ನಿಗಮದ ವಾರ್ಷಿಕ ವಹಿವಾಟು 3.4 ಕೋಟಿ ರೂಪಾಯಿ. 2024-25ನೇ ಸಾಲಿನಲ್ಲಿ 15 ಕೋಟಿ ರೂಪಾಯಿ ವ್ಯವಹಾರ ಮಾಡಲು ಎದುರು ನೋಡುತ್ತಿದೆ. ತಮ್ಮ ಸಾಧನೆಗಾಗಿ 2023ರ ಏಪ್ರಿಲ್ ತಿಂಗಳಲ್ಲಿ ಸ್ಟಾರ್ಟ್ಅಪ್ ಇಂಡಿಯಾ ಸಹಯೋಗದೊಂದಿಗೆ ನಡೆದ ಸ್ಪರ್ಧೆಯಲ್ಲಿ ಭಿಕ್ಷುಕರ ನಿಗಮ ಅತ್ಯುತ್ತಮ ಸಾಮಾಜಿಕ ಪ್ರಭಾವ ಪ್ರಶಸ್ತಿಯನ್ನು ಪಡೆದುಕೊಂಡಿದೆ. (ಏಜೆನ್ಸೀಸ್)