

ಮಂಗಳೂರು: ನಗರದ ಮೋರ್ಗನ್ಸ್ಗೇಟ್ನಲ್ಲಿ ಉದ್ಯಯೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ಸಿಬ್ಬಂದಿ ಮೇಲೆ ಪಿಸ್ತೂಲಿನಿಂದ ಹಾರಿಸಿದ ಗುಂಡು ಗುರಿತಪ್ಪಿ ಪುತ್ರನ ತಲೆ ಹೊಕ್ಕಿದೆ.
ಮೋರ್ಗನ್ಸ್ಗೇಟ್ನ ವೈಷ್ಣವಿ ಎಕ್ಸ್ಪ್ರೆಸ್ ಕಾಗೋ ಸಂಸ್ಥೆ ಮಾಲೀಕ ರಾಜೇಶ್ ಪ್ರಭು ಆರೋಪಿ. ಇವರ ಪುತ್ರ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸುಧೀಂದ್ರ(16)ಗೆ ಗುಂಡೇಟು ಬಿದ್ದಿದೆ.
ಸಂಸ್ಥೆಯ ಇಬ್ಬರು ಕಾರ್ವಿುಕರಾದ ಚಂದ್ರು ಮತ್ತು ಆಶ್ರಫ್ ಚಾಲಕ ಮತ್ತು ಕ್ಲೀನರ್ ಆಗಿ, ಸರಕು ಸಾಗಾಟ ವಾಹನದಲ್ಲಿ ಒಂದು ಟ್ರಿಪ್ ಹೋಗಿ ಬಂದಿದ್ದರು. ಸಾಯಂಕಾಲ ತಮ್ಮ ಎರಡು ದಿನದ ವೇತನವಾಗಿ 4 ಸಾವಿರ ರೂ.ವನ್ನು ಕಚೇರಿಯಲ್ಲಿದ್ದ ರಾಜೇಶ್ ಪ್ರಭು ಅವರ ಪತ್ನಿ ಬಳಿ ಕೇಳಿದಾಗ ವಾಗ್ವಾದ ನಡೆದಿತ್ತು.
ಆಕೆ ಮನೆಗೆ ಕರೆ ಮಾಡಿ ಮಗನಿಗೆ ಬರುವಂತೆ ತಿಳಿಸಿದ್ದು, ಆತನೊಂದಿಗೆ ರಾಜೇಶ್ ಪ್ರಭು ಕೂಡ ಬಂದಿದ್ದ. ಈ ವೇಳೆ ಮಗ ಸುಧೀಂದ್ರ ಆ ಇಬ್ಬರು ಸಿಬ್ಬಂದಿಯ ಮೇಲೂ ಕೈ ಮಾಡಿದ್ದು, ಸ್ಥಳದಲ್ಲಿ ಗೊಂದಲ ಉಂಟಾಗಿತ್ತು. ಕೋಪಗೊಂಡ ರಾಜೇಶ್, ತನ್ನಲ್ಲಿದ್ದ ಪಿಸ್ತೂಲ್ ತೆಗೆದು ಎರಡು ಸುತ್ತು ಗುಂಡು ಹಾರಿಸಿದ್ದು, ಸಿಬ್ಬಂದಿ ಬಚಾವಾಗಿದ್ದಾರೆ. ಅದರಲ್ಲಿ ಒಂದು ಗುಂಡು ಅಲ್ಲೇ ಕುಳಿತ್ತಿದ್ದ ಪುತ್ರನ ತಲೆಯ ಹಿಂಭಾಗಕ್ಕೆ ತಗುಲಿದೆ. ಬಾಲಕನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಉದ್ಯಮಿ ವಿರುದ್ಧ ಮಂಗಳೂರು ದಕ್ಷಿಣ(ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರವಾನಗಿ ಹೊಂದಿರುವ ಪಿಸ್ತೂಲ್: ರಾಜೇಶ್ ಪ್ರಭು ಪರವಾನಗಿ ಹೊಂದಿರುವ ಪಾಯಿಂಟ್ 32 ಬೋರ್ ಪಿಸ್ತೂಲ್ ಇಂಡಿಯನ್ ಮೇಡ್ ಪಿಸ್ತೂಲ್ ಹೊಂದಿದ್ದು, 2022ರ ಜುಲೈ 31ರ ವರೆಗೆ ಪರವಾನಗಿ ಇದೆ. ಸ್ಥಳದಲ್ಲಿ ಗುಂಡು ಹಾರಿಸಿರುವ ಅವಶೇಷ ಪತ್ತೆಯಾಗಿದೆ. ಗುಂಡು ಬಾಲಕನ ಎಡಕಣ್ಣಿನ ಭಾಗದಲ್ಲಿ ತಾಗಿಕೊಂಡು ಹೋಗಿದ್ದು, ಸುಮಾರು 7-8 ಸೆಂ.ಮೀ.ನಷ್ಟು ತಲೆ ಭಾಗಕ್ಕೆ ಹೊಕ್ಕಿದೆ. ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ತನಿಖೆ ನಡೆಸಿದ ನಂತರವೇ ಘಟನೆಗೆ ನಿರ್ದಿಷ್ಟ ಕಾರಣ ಬೆಳಕಿಗೆ ಬರಲಿದೆ. ಕೂಲಂಕಷವಾಗಿ ತನಿಖೆ ಕೈಗೊಳ್ಳಲಾಗುವುದು. ಘಟನಾ ಸ್ಥಳದ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್ಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.