

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ಹೆಂಡಿರ ಗಂಡನೊಬ್ಬನನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಗಾಯತ್ರಿನಗರದ ಮಹೇಶ್ ನಾಯ್ಕ್(42) ಬಂಧಿತ. ಈತ ನಾಲ್ಕು ವರ್ಷದ ಹಿಂದೆ ಮೊಬೈಲ್ ಕದ್ದು, ರೆಡ್ಹ್ಯಾಂಡ್ ಆಗಿ ಸೆರೆಸಿಕ್ಕಿ ಸಾರ್ವಜನಿಕರಿಂದ ಧರ್ಮದೇಟು ತಿಂದು ಜೈಲು ಸೇರಿದ್ದ. ಇದಾದ ಮೇಲೆ ನಕಲಿ ಪೊಲೀಸ್ ವೇಷದಲ್ಲಿ ವಂಚನೆಗೆ ಹಾಕಿದ್ದ. ಓಲಾ ಮತ್ತು ಊಬರ್ ಕ್ಯಾಬ್ ಚಾಲಕರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಮಹೇಶ್ನ ವಂಚನೆ ಬಯಲಾಗಿದ್ದು ಹೀಗೆ...
ಜೂ.8ರ ಮಧ್ಯಾಹ್ನ 12.30ರಲ್ಲಿ ಸುಬ್ರಮಣ್ಯನಗರದಲ್ಲಿ ವೇದಮೂರ್ತಿ ಎಂಬುವವರು ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಅಲ್ಲಿಗೆ ಬೈಕ್ನಲ್ಲಿ ಬಂದ ಮಹೇಶ್, 'ನಾನು ಪೊಲೀಸ್. ನಮ್ಮ ಅಧಿಕಾರಿಯೊಬ್ಬರ ಮನೆಯವರಿಗೆ ಬಾಡಿಗೆ ಕಾರು ಬೇಕಿದೆ. ನನ್ನ ಜತೆ ಬನ್ನಿ' ಎಂದು ವೇದಮೂರ್ತಿಯನ್ನು ರಾಜಾಜಿನಗರ 12ನೇ ಕ್ರಾಸ್ಗೆ ಕರೆದುಕೊಂಡು ಹೋಗಿದ್ದ.
ಆ ವೇಳೆ ಅಧಿಕಾರಿಗೆ ಕರೆ ಮಾಡಬೇಕೆಂದು ವೇದಮೂರ್ತಿಯ ಮೊಬೈಲ್ ಪಡೆದ ಮಹೇಶ್ ಪರಾರಿಯಾಗಿದ್ದ. ಈ ಸಂಬಂಧ ವೇದಮೂರ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಸಂಜೀವ್ ಗೌಡ ನೇತೃತ್ವದ ತಂಡ ಎಲ್ಲೆಡೆ ನಿಗಾವಹಿಸಿತ್ತು. ವಂಚನೆಗೆ ಯತ್ನಿಸುತ್ತಿದ್ದಾಗ ಆರೋಪಿ ಸೆರೆಸಿಕ್ಕಿದ್ದಾನೆ.
ಓಲಾ ಮತ್ತು ಊಬರ್ ಕ್ಯಾಬ್ ಚಾಲಕರನ್ನೇ ಟಾರ್ಗೆಟ್ ಮಾಡಿ ಪೊಲೀಸ್ ಅಧಿಕಾರಿಗೆ ಬಾಡಿಗೆ ಕಾರು ಬೇಕೆಂದು ಕರೆದುಕೊಂಡು ಹೋಗುತ್ತಿದ್ದ ಮಹೇಶ್, ಕಾರನ್ನು ತಕ್ಷಣ ತಿರುವು ಪಡೆಯಲು ಸಾಧ್ಯವಾಗದ ಸ್ಥಳದಲ್ಲಿ ನಿಲ್ಲಿಸಿಕೊಂಡು ಮೊಬೈಲ್ ಪಡೆದು ಬೈಕ್ನಲ್ಲಿ ಪರಾರಿಯಾಗುತ್ತಿದ್ದ.
ಬಂಧಿತನಿಂದ 2.87 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 20 ಮೊಬೈಲ್, 2 ಬೈಕ್ ವಶಕ್ಕೆ ಪಡೆಯಲಾಗಿದೆ. 2019ರಲ್ಲಿ ಜೆ.ಸಿ. ನಗರದಲ್ಲಿ ಬೈಕ್ ಕದ್ದು ಅದರ ನಂಬರ್ ಪ್ಲೆಟ್ ತೆಗೆದು ನಕಲಿ ನಂಬರ್ ಪ್ಲೆಟ್ ಹಾಕಿಕೊಂಡು ಅದರ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಓಡಾಡುತ್ತಿದ್ದ. ಕೆ.ಸಿ.ಜನರಲ್ ಆಸ್ಪತ್ರೆಗೆ ರೋಗಿಗಳನ್ನು ಕರೆತರುವ ಕ್ಯಾಬ್ ಅಥವಾ ಕಾರು ಮಾಲೀಕ/ಚಾಲಕರಿಗೆ ಯಾಮಾರಿಸಿ ಮೊಬೈಲ್ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ.