ವಿಚ್ಛೇದನ ಪ್ರಕರಣ: ಜಗಳೂರಿನ ಕೋರ್ಟ್ ಆವರಣದಲ್ಲೇ ಬಾವನ ಕತ್ತು ಕೊಯ್ದ ಬಾಮೈದುನ!

New Project (2)
Published on

ದಾವಣಗೆರೆ: ಕೋರ್ಟ್ ಆವರಣದಲ್ಲೇ ಯುವಕನೊಬ್ಬ ಅಕ್ಕನ ಗಂಡನ ಕತ್ತು ಕೊಯ್ದ ಘಟನೆ ಜಗಳೂರಿನಲ್ಲಿ ಸಂಭವಿಸಿದೆ.

ಜಗಳೂರು ಪಟ್ಟಣದ ಸಿವಿಲ್ ಕೋರ್ಟ್ ಆವರಣದಲ್ಲಿ ಮಂಗಳವಾರ ಈ ಅವಘಡ ಸಂಭವಿಸಿದ್ದು, ಸ್ಥಳದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕುಟುಂಬಸ್ಥರು ಕೋರ್ಟ್​ಗೆ ಬಂದಿದ್ದ ವೇಳೆ ಬಾವನ ಹತ್ಯೆಗೆ ಬಾಮೈದುನನಿಂದಲೇ ಕೊಲೆ ಯತ್ನ ನಡೆದಿದ್ದು, ಗಂಭೀರ ಗಾಯಗೊಂಡ ಬಾವ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದ ಮಂಜುನಾಥ್(35) ಹಲ್ಲೆಗೆ ಒಳಗಾದವ. ಈತನ ಪತ್ನಿಯ ಸಹೋದರ, ಹಿರೇಮ್ಯಾಗಳಗರೆ ಗ್ರಾಮದ ಮಲ್ಲಿಕಾರ್ಜುನ ಹಲ್ಲೆ ಮಾಡಿ ಕತ್ತು ಕೊಯ್ದವ. ಮಂಜುನಾಥ್ ಮತ್ತು ಹಾಗೂ ಪತ್ನಿ ವಿಚ್ಛೇದನಕ್ಕಾಗಿ 2008ರಿಂದ ಕೋರ್ಟ್‌ಗೆ ಅಲೆಯುತ್ತಿದ್ದಾರೆ. ಇಂದು ಕೂಡ ಎಂದಿನಂತೆ ಎರಡು ಕುಟುಂಬಗಳು ಕೋರ್ಟ್‌ಗೆ ಬಂದಿದ್ದರು. ಜೀವನಾಂಶ ವಿಚಾರವಾಗಿ ಗಲಾಟೆಯೂ ಆಗಿದೆ. ಎರಡೂ ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ನೋಡನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿತ್ತು. ಚಾಕುವಿನಿಂದ ಬಾವನ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದಾನೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net