

ಬೆಂಗಳೂರು: ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಡೇಟಿಂಗ್ಗಾಗಿ ಹಾತೊರೆದು ಡೇಟಿಂಗ್ ಆಪ್ನಲ್ಲಿ ಖಾತೆ ತೆರೆದಿದ್ದರು. ವ್ಯಕ್ತಿಯೊಬ್ಬನ ಗೆಳೆತನ ಬೆಳೆಸಿ, ಆತನನ್ನು ನಂಬಿದ ಆ ಮಹಿಳೆಗೆ ಸಂಕಷ್ಟ ಎದುರಾಗಿದೆ.
ಆಸ್ಟಿನ್ಟೌನ್ ನಿವಾಸಿ ನಿಲೋಫರ್ (37) ಎಂಬ ಮಹಿಳೆ ಬೆಮಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಡೇಟಿಂಗ್ ಆಪ್ನಲ್ಲಿ ನಿಲೋಫರ್ ಖಾತೆ ತೆರೆದಿದ್ದರು. ಅಲ್ಲಿ ಸ್ನೇಹಿತನಾದ ವ್ಯಕ್ತಿ ತಾನು ವಿದೇಶದಲ್ಲಿರುವುದಾಗಿ ನಂಬಿಸಿದ್ದ. ತಾನು ವಿದೇಶದಿಂದ ಬಂದು ನಿನ್ನನ್ನೇ ವಿವಾಹವಾಗುವುದಾಗಿಯೂ ಭರವಸೆ ಕೊಟ್ಟಿದ್ದ. ಆತನ ಮಾತಿಗೆ ಮರುಳಾದ ನಿಲೋಫರ್ ಆತನನ್ನು ವಿವಾಹವಾಗಲು ಒಪ್ಪಿದ್ದಳು.
ಸೆ.30ರಂದು ನಿಲೋಫರ್ಗೆ ಕರೆ ಮಾಡಿದ ಆರೋಪಿ, ತನ್ನ ಉದ್ಯಮ ನಷ್ಟದಲ್ಲಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ. ಸ್ವಲ್ಪ ಹಣ ನೀಡಿದರೆ, ಮುಂದಿನ ತಿಂಗಳು ಬೆಲೆ ಬಾಳುವ ಉಡುಗೊರೆಯೊಂದಿಗೆ ಹಣ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದ. ಇದನ್ನು ನಂಬಿದ ನಿಲೋಫರ್, ಸೆ.30ರಿಂದ ಅ.4ರ ವರೆಗೆ ಹಂತ-ಹಂತವಾಗಿ 18.29 ಲಕ್ಷ ಹಣವನ್ನು ಆರೋಪಿಯ ಖಾತೆಗೆ ವರ್ಗಾವಣೆ ಮಾಡಿದ್ದರು. ಹಣ ಜಮೆಯಾಗುತ್ತಿದ್ದಂತೆ ಆರೋಪಿ ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ. ಆಗ ತಾನು ಮೋಸ ಹೋಗಿರುವುದನ್ನು ಅರಿತ ನಿಲೋಫರ್ ಕೂಡಲೇ ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.