

ಬೆಂಗಳೂರು: ಪತ್ನಿ, ಇಬ್ಬರು ಮುದ್ದಾದ ಮಕ್ಕಳಿದ್ದರೂ ಈತನಿಗೆ ಅವಿವಾಹಿತ ಮಹಿಳೆಯರ ಜತೆ ಡೇಟಿಂಗ್ ಮಾಡುವ ಚಟ. ಡೇಟಿಂಗ್ ಅನ್ನೇ ಬಂಡವಾಳ ಮಾಡಿಕೊಂಡ ಈತ ಮಹಿಳೆಯರನ್ನ ಪುಸಲಾಯಿಸಿ ಅವರ ಮನೆಗೇ ತೆರಳುತ್ತಿದ್ದ... ಮಹಿಳೆಯರ ವಿವಸ್ತ್ರಗೊಳಿಸಿ ಮೊಬೈಲ್ನಲ್ಲಿ ಫೋಟೋಗಳನ್ನು ಸೆರೆ ಹಿಡಿದಿದು ವರಸೆ ಬದಲಿಸುತ್ತಿದ್ದ...
ಕೊಡಿಗೇಹಳ್ಳಿ ವ್ಯಾಪ್ತಿಯ ಅವಿವಾಹಿತ ಮಹಿಳೆಯೊಬ್ಬರು ಕೊಟ್ಟ ದೂರಿನ ಮೇರೆಗೆ ಛತ್ತೀಸ್ಗಢ ಮೂಲದ ಅಭಿಷೇಕ್ (33) ಎಂಬಾತನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಾಪ್ಟ್ವೇರ್ ಉದ್ಯೋಗಿಯಾಗಿರುವ ಅಭಿಷೇಕ್, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಎಚ್ಎಸ್ಆರ್ ಲೇಔಟ್ನಲ್ಲಿ ನೆಲೆಸಿದ್ದ.
ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಡೇಟಿಂಗ್ ಆ್ಯಪ್ನಲ್ಲಿ ಅವಿವಾಹಿತ ಮಹಿಳೆಯರನ್ನು ಪರಿಚಯಿಸಿಕೊಂಡು ಪುಸಲಾಯಿಸಿ ಡೇಟಿಂಗ್ ನೆಪದಲ್ಲಿ ಮನೆಗೆ ತೆರಳಿ ವಿವಸ್ತ್ರಗೊಳಿಸಿ ಫೋಟೋ ತೆಗೆದುಕೊಳ್ಳುತ್ತಿದ್ದ. ಆನಂತರ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಇದೇ ರೀತಿ ಕೊಡಿಗೇಹಳ್ಳಿ ವ್ಯಾಪ್ತಿಯ ಅವಿವಾಹಿತ ಮಹಿಳೆಯೊಬ್ಬರನ್ನು ಡೇಟಿಂಗ್ ಆ್ಯಪ್ನಲ್ಲಿ ಪರಿಚಯಿಸಿಕೊಂಡು ಅವರ ಮೊಬೈಲ್ ನಂಬರ್ ಪಡೆದಿದ್ದ. ಕರೆ ಮತ್ತು ಮೆಸೇಜ್ ಮಾಡಿ ಪುಸಲಾಯಿಸಿ ಫೆ.1ರಂದು ಆ ಮಹಿಳೆಯ ಮನೆಗೆ ತೆರಳಿದ್ದ. ಅಲ್ಲಿ ಆಕೆಯ ವಿವಸ್ತ್ರಗೊಳಿಸಿ ಮೊಬೈಲ್ನಲ್ಲಿ ಫೋಟೋಗಳನ್ನು ಸೆರೆ ಹಿಡಿದಿದ್ದ.
ಮನೆಯಿಂದ ಹೊರ ಬಂದಾತ ಆ ಮಹಿಳೆಗೆ ಕರೆ ಮಾಡಿ ಲಕ್ಷಾಂತರ ರೂ.ಗೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದಲ್ಲಿ ಅಶ್ಲೀಲ ಫೋಟೋಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಸಂತ್ರಸ್ತೆ ದೂರು ನೀಡಿದ ಮೂರು ತಾಸಿನೊಳಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.