

ಹುಬ್ಬಳ್ಳಿ: ಇಲ್ಲಿಯ ಭೈರಿದೇವರಕೊಪ್ಪದ ಚರ್ಚ್ನಲ್ಲಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಚರ್ಚ್ ಆವರಣಕ್ಕೆ ನುಗ್ಗಿದ ಪರಿಣಾಮ ಭಾನುವಾರ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.
ಆಲ್ ಅಸೆಬಲ್ ಎಂಬ ಹೆಸರಿನ ಚರ್ಚ್ನಲ್ಲಿ ಈ ಘಟನೆ ನಡೆದಿದ್ದು, ಪ್ರಾರ್ಥನೆ ಹೆಸರಿನಲ್ಲಿ ಹಿಂದುಗಳನ್ನು ಚರ್ಚ್ಗೆ ಕರೆ ತಂದು ಮತಾಂತರಕ್ಕೆ ಪುಸಲಾಯಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ಮತಾಂತರ ಯತ್ನ ಕೈ ಬಿಡಬೇಕು ಎಂದು ಆಗ್ರಹಿಸಿದರಲ್ಲದೆ, ಚರ್ಚ್ ಆವರಣದ ಬಳಿಯಲ್ಲಿಯೇ ಕುಳಿತು ಕೆಲವು ನಿಮಿಷ ಕಾಲ ಭಜನೆ ಮಾಡುವ ಮೂಲಕ ಮತಾಂತರವನ್ನು ವಿರೋಧಿಸಿದರು. ಸ್ಥಳೀಯರು ಸೇರಿ ನೂರಾರು ಜನರು ಅಲ್ಲಿ ಜಮಾಯಿಸಿದ್ದರಿಂದ ಚರ್ಚ್ನವರು ಹಾಗೂ ಸಾರ್ವಜನಿಕರ ಮಧ್ಯೆ ವಾಗ್ವಾದ ನಡೆದವು.
ಸ್ಥಳಕ್ಕೆ ಆಗಮಿಸಿದ ಎಪಿಎಂಸಿ- ನವನಗರ ಠಾಣೆ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಪ್ರಯಾಸ ಪಡಬೇಕಾಯಿತು. ಚರ್ಚ್ನ ಸೋಮು ಎಂಬುವರನ್ನು ಸಾರ್ವಜನಿಕರೇ ಠಾಣೆಗೆ ಕರೆದುಕೊಂಡು ಹೋದರು ಎಂದು ಹೇಳಲಾಗಿದೆ. ಚರ್ಚ್ ಬಳಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.
ಠಾಣೆ ಎದುರು ಪ್ರತಿಭಟನೆ: ಚರ್ಚ್ನ ಫಾಸ್ಟರ್ ಸೇರಿ ಕೆಲವರನ್ನು ಸ್ಥಳೀಯರು, ಹಿಂದು ಸಂಘಟನೆ ಕಾರ್ಯಕರ್ತರು ನವನಗರ ಪೊಲೀಸರಿಗೆ ಒಪ್ಪಿಸಿದರು. ಆದರೂ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕೆಲಹೊತ್ತು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ನಂತರ ಅಲ್ಲಿಂದ ಹೊರಟ ಕಾರ್ಯಕರ್ತರು ಹುಬ್ಬಳ್ಳಿ-ಧಾರವಾಡ ರಸ್ತೆಗೆ ಬಂದು ವಾಹನ ತಡೆ ಪ್ರತಿಭಟನೆಯನ್ನೂ ನಡೆಸಿದರು.
ಸತೀಶ ದಿಕ್ಷೀತ, ಪವನ ಸಾರಥಿ, ಜಯತೀರ್ಥ ಕಟ್ಟಿ, ಗಿರೀಶ ಸವಡಿಜೋಶಿ, ಸಂಜಯ ಮಾಳವದೇಕರ, ರಾಘವೇಂದ್ರ ಪೂಜಾರಿ, ಗುರು ಢಗೆ, ಮಲ್ಲಿಕಾರ್ಜುನ ಅಂಗಡಿ, ಸ್ವಾಮಿ ಮಹಾಜನಶೆಟ್ಟರ್, ಸೋಮಶೇಖರ ಹತ್ತಿ, ಸಚಿನ್ ಪಾಟೀಲ್, ಶಿವು ಪೂಜಾರ, ವಾಸುದೇವ ಮಾಸ್ತಿ, ಮಂಜುನಾಥ ಹಳ್ಳೂರ, ರಾಜು ಸವಡಿಜೋಶಿ, ಆಕಾಶ ಮೇತ್ರಿ, ಸೂರಜಗೌಡ, ರಾಜು ಬೆಂಗೇರಿ, ವಿಶ್ವನಾಥ ಮುದನೂರ ಎಂಬುವರು ಸೇರಿ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.