

ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ, ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ನಿವೃತ್ತ ಡಿಜಿಪಿ ಎಚ್.ಎನ್. ಸತ್ಯನಾರಾಯಣ ರಾವ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಬುಧವಾರ ಹೈಕೋರ್ಟ್ ರದ್ದು ಪಡಿಸಿದೆ.
ರೂಪಾ ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಜತೆಗೆ, ಸರ್ಕಾರಿ ಅಧಿಕಾರಿಯೊಬ್ಬರು ಮತ್ತೋರ್ವ ಅಧಿಕಾರಿಯ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವುದು ಮಾನನಷ್ಟ ಪ್ರಕರಣದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಪ್ರಕರಣವೇನು?: ರಾಜ್ಯ ಕಾರಾಗೃಹ ಇಲಾಖೆ ಡಿಐಜಿ ಆಗಿದ್ದ ಡಿ. ರೂಪಾ 2017ರ ಜು.12ರಂದು ಸರ್ಕಾರಕ್ಕೆ ವರದಿ ಸಲ್ಲಿಸಿ, ಕಾರಾಗೃಹ ಇಲಾಖೆ ಡಿಜಿಪಿಯಾಗಿದ್ದ ಎಚ್.ಎನ್. ಸತ್ಯನಾರಾಯಣ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಕಲ್ಪಿಸಲು ಸತ್ಯನಾರಾಯಣ ರಾವ್ 2 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳೂ ಪ್ರಕಟಗೊಂಡಿದ್ದರು. ಜು.31ರಂದು ಸತ್ಯನಾರಾಯಣ ರಾವ್ ನಿವೃತ್ತರಾಗಿದ್ದರು. ಈ ಮಧ್ಯೆ, ಡಿ.ರೂಪಾ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದು, ನತೆಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿದ್ದ ರಾವ್, 2018ರ ಫೆ.5ರಂದು ನಗರದ 9ನೇ ಎಸಿಎಂಎಂ ನ್ಯಾಯಾಲಯಕ್ಕೆ 20 ಕೋಟಿ ರೂ. ಪರಿಹಾರ ಕೋರಿ ಖಾಸಗಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ದೂರುದಾರರ ಪ್ರಮಾಣೀಕೃತ ಹೇಳಿಕೆ ದಾಖಲಿಸಿಕೊಡಿದ್ದ ನ್ಯಾಯಾಲಯ, 2021ರ ಆ.6ರಂದು ಡಿ.ರೂಪಾ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.
ಡಿ.ರೂಪಾ ಪರ ವಕೀಲರು ವಾದ ಮಂಡಿಸಿ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 199 ಪ್ರಕಾರ ಸರ್ಕಾರಿ ಅಧಿಕಾರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾದರೆ ವಿಶೇಷ ನಿಯಮ ಅನುಸರಿಸಬೇಕಿದ್ದು, ಸರ್ಕಾರಿ ಅಭಿಯೋಜಕರ ಮೂಲಕವೇ ಸೆಷನ್ಸ್ ನ್ಯಾಯಾಲಯಕ್ಕೆ ಮೊಕದ್ದಮೆ ದಾಖಲಿಸಬೇಕು. ಮಾನಹಾನಿ ವರದಿ ಪ್ರಕಟಗೊಂಡ 6 ತಿಂಗಳ ಒಳಗೆ ಮೊಕದ್ದಮೆ ದಾಖಲಿಸಬೇಕು. ಆದರೆ, ಸತ್ಯನಾರಾಯಣ ರಾವ್ ಸರ್ಕಾರಿ ಅಧಿಕಾರಿಯಾಗಿರುವ ಡಿ.ರೂಪಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವಾಗ ಈ ನಿಯಮ ಪಾಲನೆ ಮಾಡಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಡಿ. ರೂಪಾ ತಮ್ಮ ಅಧಿಕೃತ ಕರ್ತವ್ಯ ನಿರ್ವಹಣೆ ಭಾಗವಾಗಿ ವರದಿ ಸಲ್ಲಿಸಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರು ಮತ್ತೊಬ್ಬ ಅಧಿಕಾರಿ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವುದು ಮಾನನಷ್ಟ ಪ್ರಕರಣದ ವ್ಯಾಪ್ತಿಗೆ ಬರುವುದಿಲ್ಲ. ಹೀಗಿದ್ದರೂ, ರಾವ್ ದಾಖಲಿಸಿದ ಮಾನನಷ್ಟ ಮೊಕದ್ದಮೆ ದೂರು ಪರಿಗಣಿಸಿ ತನಿಖೆಗೆ ಆದೇಶಿಸಿರುವುದು ಹಾಗೂ ಕಾಗ್ನಿಜೆನ್ಸ್ ತೆಗೆದುಕೊಂಡು, ಸಮನ್ಸ್ ಜಾರಿ ಮಾಡಿರುವ ಮ್ಯಾಜಿಸ್ಟ್ರೆಟ್ ಕೋರ್ಟ್ ಕ್ರಮ ಕಾನೂನು ಬಾಹಿರವಾಗಿದೆ. ಆದ್ದರಿಂದ, ರೂಪಾ ವಿರುದ್ಧದ ವಿಚಾರಣೆ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೂ ಮ್ಯಾಜಿಸ್ಟ್ರೆಟ್ ಕೋರ್ಟ್ನ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿದ್ದರು. ಪ್ರಕರಣ ಸಂಬಂಧ ಬೆಂಗಳೂರಿನ ಮ್ಯಾಜಿಸ್ಟ್ರೆಟ್ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಡಿ.ರೂಪಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ.ಕೆ.ನಟರಾಜ್ ಅವರಿದ್ದ ಪೀಠ, ಜ.11ರಂದು ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು. ಇದೀಗ ನ್ಯಾ. ಎಂ.ನಾಗಪ್ರಸನ್ನ ಅವರ ಪೀಠ, ವಿಚಾರಣೆಯನ್ನೇ ರದ್ದು ಮಾಡಿದೆ.