ಉತ್ತರ ಕನ್ನಡದ ಯುವತಿ ಹೃದಯ ಬೆಳಗಾವಿ ಯುವಕನಿಗೆ ಕಸಿ! ಸಾವಲ್ಲೂ ಸಾರ್ಥಕತೆ, ನಾಲ್ವರಿಗೆ ಜೀವದಾನ

donates organs
Published on

ಧಾರವಾಡ: ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದ ಉತ್ತರಕನ್ನಡ ಜಿಲ್ಲೆಯ ಯುವತಿ ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಗಳು ಇನ್ನು ಬದುಕುವುದಿಲ್ಲ ಎಂಬ ಆಘಾತಕಾರಿ ವಿಷಯ ಕೇಳಿದ ಪಾಲಕರು, ನೋವಲ್ಲೂ ಮಗಳ ಅಂಗಾಂಗ ದಾನ ಮಾಡಿದ್ದಾರೆ. ಉತ್ತರಕನ್ನಡ ಯುವತಿಯ ಹೃದಯವನ್ನ ಬೆಳಗಾವಿ ಯುವಕನಿಗೆ ಕಸಿ ಮಾಡಲು ಧಾರವಾಡದಿಂದ ಆಂಬುಲೆನ್ಸ್​ ಮೂಲಕ ಝೀರೋ ಟ್ರಾಫಿಕ್​ನಲ್ಲಿ ಕೊಂಡೊಯ್ಯಲಾಗಿದೆ.

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವತಿಯನ್ನು ಧಾರವಾಡ ನಗರದ ಸತ್ತೂರಿನ ಎಸ್‌ಡಿಎಂ ಆಸ್ಪತ್ರೆಗೆ ಸೋಮವಾರ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಮೆದುಳು ನಿಷ್ಕ್ರಿಯ ಆಗಿದೆ ಎಂದು ವೈದ್ಯರು ಖಚಿತಪಡಿಸಿದರು. ನಂತರ ವೈದ್ಯಕೀಯ ಕಾನೂನುಗಳ ಅನ್ವಯ ಯುವತಿಯ ಪಾಲಕರು ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು.

ಅದರಂತೆ ಯುವತಿಯ ಹೃದಯವನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಸಾಗಿಸಲು ವೈದ್ಯರು ನಿರ್ಧರಿಸಿದರು. ಸತ್ತೂರಿನಲ್ಲಿರುವ ಎಸ್‌ಡಿಎಂ ಆಸ್ಪತ್ರೆಯಿಂದ ಧಾರವಾಡದ ಮೂಲಕ ಬೆಳಗಾವಿಗೆ ಝೀರೋ ಟ್ರಾಫಿಕ್ ಮೂಲಕ ಆಂಬುಲೆನ್ಸ್​ನಲ್ಲಿ ಸಾಗಿಸಲಾಯಿತು. ಆಂಬುಲೆನ್ಸ್ ಸಾಗಲು ಬಿಆರ್‌ಟಿಎಸ್ ಪಥದಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.

ಅದೇರೀತಿ ವಿಮಾನದ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಯುವತಿಯ ಲಿವರ್ ಸಾಗಿಸಲಾಯಿತು. ಒಂದು ಕಿಡ್ನಿಯನ್ನು ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ ಹಾಗೂ ಮತ್ತೊಂದನ್ನು ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಿಗೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net