

ತುಮಕೂರು: ಕೆನಡಾ ಸಂಸತ್ತಿನಲ್ಲಿ ಪ್ರಪ್ರಥಮ ಬಾರಿಗೆ ಕನ್ನಡ ಕಹಳೆ ಮೊಳಗಿಸಿ ಒಂದೇ ದಿನದಲ್ಲಿ ಜಗದ್ವಿಖ್ಯಾತಿ ಪಡೆದ ಅಲ್ಲಿನ ಸಂಸತ್ ಸದಸ್ಯ, ಕನ್ನಡಿಗ ಚಂದ್ರ ಆರ್ಯ ಅವರು ಹುಟ್ಟೂರು ತುಮಕೂರು ಜಿಲ್ಲೆ ಶಿರಾ ತಾಲೂಕಿನ ದ್ವಾರಾಳು ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದರು.
ಕಳೆದ ಮೇ ತಿಂಗಳಲ್ಲಿ ಕೆನಡಾದ ಸಂಸತ್ ಸದಸ್ಯರಾಗಿ ಆಯ್ಕೆಯಾದ ಕರ್ನಾಟಕದ ಚಂದ್ರ ಆರ್ಯ ಅವರು ಕೆನಡಾ ಪಾರ್ಲಿಮೆಂಟ್ನಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಎಲ್ಲರ ಗಮನ ಸೆಳೆಯುವ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಇಂದು ಬೆಳಗ್ಗೆ ಹುಟ್ಟೂರಿಗೆ ಆಗಮಿಸಿದ ಚಂದ್ರ ಆರ್ಯ ಅವರು ಗಜ್ಜಿಗರಹಳ್ಳಿ ಲಕ್ಷ್ಮೀ ದೇವಸ್ಥಾನಕ್ಕೆ ಪತ್ನಿ ಜತೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಗ್ರಾಮದ ಹಳೇ ಸ್ನೇಹಿತರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಗ್ರಾಮಸ್ಥರು ಚಂದ್ರ ಆರ್ಯ ಅವರಿಗೆ ಪೇಟ ತೊಡಿಸಿ ಸನ್ಮಾನ ಮಾಡಿದರು.