

ಬೀಜಿಂಗ್: ಕಿಬ್ಬೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ 33 ವರ್ಷದ ವ್ಯಕ್ತಿಗೆ ತಪಾಸಣೆ ಬಳಿಕ ಆಘಾತಕಾರಿ ವಿಷಯ ಗೊತ್ತಾಗಿದೆ. ಪುರುಷ ಜನನಾಂಗ ಇದ್ದರೂ ಮಾಸಿಕ ಋತುಚಕ್ರ(ಮುಟ್ಟು) ಆಗುತ್ತಿರುವ ಸತ್ಯ 20 ವರ್ಷದ ಬಳಿಕ ಅರಿವಾಗಿದೆ! ತಾನು ಗಂಡಾಗಿದ್ದರೂ ಪಿರಿಯಡ್ಸ್ ಆಗುತ್ತಿದೆ ಎಂಬ ವಿಚಾರ ಕೇಳಿ ಶಾಕ್ ಆಗಿದ್ದಾರೆ.
ಇಂತಹ ವಿಚಿತ್ರ ಪ್ರಕರಣ ಚೀನಾದ ಸಿಚುವಾನ್ ಪ್ರಾಂತ್ಯದದಲ್ಲಿ ಬೆಳಕಿಗೆ ಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಚೆನ್ ಲಿ ಎಂಬುವರು ಪ್ರೌಢಾವಸ್ಥೆಯಲ್ಲಿದ್ದಾಗಲೇ ಅನಿಯಮಿತ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಚಿಕಿತ್ಸೆಯನ್ನೂ ಪಡೆದಿದ್ದರಂತೆ. ತಿಂಗಳಿಗೊಮ್ಮೆ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತಂತೆ. ಮೂತ್ರದಲ್ಲಿ ರಕ್ತವೂ ಹೋಗುತ್ತಿತ್ತಂತೆ. 20 ವರ್ಷದಿಂದ ಪದೇಪದೆ ಈ ಸಮಸ್ಯೆ ಮರುಕಳಿಸುತ್ತಿದ್ದರೂ ಕಾರಣ ಏನೆಂದು ಇವರಿಗೆ ತಿಳಿದಿರಲಿಲ್ಲ. ಕೆಲ ತಿಂಗಳ ಹಿಂದೆ ಕಿಬ್ಬೊಟ್ಟೆ ನೋವು ವಿಪರೀತ ಕಾಣಿಸಿಕೊಂಡಿದ್ದರಿಂದ ಗುವಾಂಗ್‌ಝೌ ಆಸ್ಪತ್ರೆಗೆ ತೆರಳಿದ್ದರು. ಇವರನ್ನು ತಪಾಸಣೆ ನಡೆಸಿದ ವೈದ್ಯರೇ ಶಾಕ್ ಆಗಿದ್ದಾರೆ. ಚೆನ್ ಲಿ ನೋಡೋಕೆ ಪುರುಷನಂತೆ ಇದ್ದರೂ, ಪುರುಷ ಜನನಾಂಗ ಇದ್ದರೂ ಅಂಡಾಶಯ ಮತ್ತು ಗರ್ಭಾಶಯ ಹೊಂದಿರುವುದು ಗೊತ್ತಾಗಿದೆ. ಇವರಿಗೆ ಪದೇಪದೆ ಕಿಬ್ಬೊಟ್ಟೆ ನೋವು, ಮೂತ್ರದಲ್ಲಿ ರಕ್ತಸ್ರಾವಕ್ಕೆ ಕಾರಣ ಪಿರಿಯಡ್ಸ್ ಎಂಬುದು ಬಯಲಾಗಿದೆ.
ತನಗೆ ಸ್ತ್ರೀ ಲೈಂಗಿಕ ವರ್ಣತಂತು ಇರುವ ವಿಚಾರ ಕೇಳಿ ತೀವ್ರ ಆಘಾತಕ್ಕೊಳಗಾದ ಚೆನ್ ಲಿ, ತನ್ನಲ್ಲಿರುವ ಅಂಡಾಶಯ ಮತ್ತು ಗರ್ಭಾಶಯ ತೆಗೆದುಹಾಕಲು ಗುವಾಂಗ್‌ಝೌ ಆಸ್ಪತ್ರೆ ವೈದ್ಯರ ಬಳಿ ಮನವಿ ಮಾಡಿದ್ದರು. ಅದರಂತೆ ಜೂನ್ 6ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪುರುಷ ಸ್ತ್ರೀಯಾಗಿ ಬದಲಾಗುವುದು, ಯುವಕನಾಗಿ ಯುವತಿ ಬದಲಾಗುವ ಪ್ರಕರಣಗಳು ಪದೇಪದೆ ಸಂಭವಿಸುತ್ತಲೇ ಇವೆ. ಆದರೆ, ಥೇಟ್ ಯುವಕನಂತಿದ್ದ, ಪುರುಷ ಜನನಾಂಗ ಇದ್ದರೂ ಚೆನ್ ಲಿ ಅವರಿಗೆ ಮಾಸಿಕ ಮುಟ್ಟು ಆಗುತ್ತಿದ್ದ ವಿಚಾರ ಸಹಜವಾಗಿ ಆತಂಕ ಮೂಡಿಸಿದೆ. (ಏಜೆನ್ಸೀಸ್)