ಅನಂತರಾಜು ಡೆತ್​ ಕೇಸ್​ಗೆ ಮತ್ತೊಂದು ಟ್ವಿಸ್ಟ್​: ಪತ್ನಿ-ಪ್ರೇಯಸಿ ನಡುವಿನ 2ನೇ ಆಡಿಯೋ ವೈರಲ್​, ಸ್ಥಳೀಯರಲ್ಲಿ ಗುಸುಗುಸು ಶುರು

anantaraju
Published on

ಬೆಂಗಳೂರು: ಮಾಗಡಿ ರಸ್ತೆ ಬ್ಯಾಡರಹಳ್ಳಿಯ ಬಿಜೆಪಿ ಮುಖಂಡ ಬಿ.ಪಿ. ಅನಂತರಾಜು ಆತ್ಮಹತ್ಯೆ ಪ್ರಕರಣ ಸಂಬಂಧ ಗುರುವಾರ ಮತ್ತೊಂದು ಆಡಿಯೋ ವೈರಲ್​ ಆಗಿದ್ದು, ಕೇಸ್​ಗೆ ಮತ್ತೊಂದು ತಿರುವು ಪಡೆದಿದೆ. ಇದು ಮೃತರ ಪತ್ನಿ ಬಿ.ಕೆ. ಸುಮಾ ಮತ್ತು ಪ್ರೇಯಸಿ ರೇಖಾ ನಡುವಿನ ಸಂಭಾಷಣೆ ಎನ್ನಲಾಗಿದ್ದು, ಸಾವಿಗೆ ಅನಾರೋಗ್ಯ ಕಾರಣ ಅಲ್ಲ, ಹನಿಟ್ರ್ಯಾಪ್ ಕೂಡ ಅಲ್ಲ. ಪತ್ನಿಯ ಟಾರ್ಚರ್​ ಸಹಿಸಲಾಗದೇ ಅನಂತರಾಜು ಸತ್ತಿದ್ದಾರೆ ಎಂದು ಸ್ಥಳೀಯರಲ್ಲಿ ಗುಸುಗುಸು ಶುರುವಾಗಿದೆ.

ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಂತರಾಜು​, ಮೇ 12ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಥೈರಾಯಿಡ್​ ಸಮಸ್ಯೆಯಿಂದ ಸಾವಿನ ನಿರ್ಧರಕ್ಕೆ ಬಂದಿದ್ದಾರೆ ಎಂದು ಮೊದಲು ದೂರು ನೀಡಲಾಗಿತ್ತು. ಆನಂತರ ಪತ್ನಿ ಸುಮಾ, ನನ್ನ ಗಂಡನನ್ನು ಹನಿಟ್ರ್ಯಾಪ್​ ಮಾಡಿ ಕೊಂದಿದ್ದಾರೆ. ಕೆ.ಆರ್​. ಪುರದ ರೇಖಾ, ಈಕೆಯ ಪತಿ ವಿನೋದ್​ ಮತ್ತು ಸ್ನೇಹಿತೆ ಸ್ಪಂದನಾಳ ಕಿರುಕುಳ ಸಹಿಸಲಾಗದೆ ನನ್ನ ಗಂಡ ಸತ್ತಿದ್ದಾರೆ ಎಂದು ದೂರು ನೀಡಿದ್ದರು. ಇದರ ಆಧಾರದ ಮೇಲೆ ರೇಖಾಳನ್ನು ಪೊಲೀಸರು ಬಂಧಿಸಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಬುಧವಾರ ಆಡಿಯೋವೊಂದು ವೈರಲ್​ ಆಗಿತ್ತು. ‘ನಾನೇ ಅನಂತರಾಜುಗೆ ಟಾರ್ಚರ್​ ಕೊಟ್ಟು ಸಾಯ್ತೀನಿ. ನಾನು ಕೊಡೋ ಟಾರ್ಚರ್​ಗೆ ಹಾರ್ಟ್​ಅಟ್ಯಾಕ್​ ಆಗಿ ಅವನು ಸಾಯ್ಬೇಕು' ಎಂದು ಫೋನ್​ನಲ್ಲಿ ರೇಖಾಗೆ ಸುಮಾ ಆಕ್ರೋಶದಿಂದ ಹೇಳುತ್ತಾ ಗಂಡನಿಗೆ ಬೈಯ್ಯುತ್ತಾ ಹೊಡೆಯುತ್ತಿದ್ದ ಹಿನ್ನೆಲೆ ಈ ಆಡಿಯೋದಲ್ಲಿತ್ತು. 'ಪ್ಲೀಸ್​ ಸುಮಾ… ಅವರಿಗೆ ಏನೂ ಮಾಡ್ಬೇಡ ಸುಮಾ, ನಿನ್ನ ಕಾಲು ಹಿಡ್ಕೋತೀನಿ ಸುಮಾ, ಐ ವೆರಿ ಸಾರಿ ಸುಮಾ, ನಾನು ದೂರ ಇರ್ತೀನಿ. ಪ್ಲೀಸ್​ ಸುಮಾ ಅವರಿಗೆ ಏನು ಮಾಡ್ಬೇಡ' ಎಂದು ರೇಖಾ ಕಣ್ಣೀರು ಹಾಕುತ್ತಾ ಗೋಗರೆದರೂ ಸುಮಾ, 'ಅವನು ಸಾಯಬೇಕು' ಎನ್ನುವುದು ಆಡಿಯೋದಲ್ಲಿದೆ. ಇದರ ಬೆನ್ನಲ್ಲೇ 2ನೇ ಆಡಿಯೋ ವೈರಲ್​ ಆಗಿದ್ದು, ಇದು ಕೂಡ ಅನಂತರಾಜ್​ ಪತ್ನಿ ಸುಮಾ ಮತ್ತು ರೇಖಾ ನಡುವಿನ ಸಂಭಾಷಣೆ ಎನ್ನಲಾಗಿದೆ.

2ನೇ ಆಡಿಯೋದಲ್ಲಿ ಏನಿದೆ?: ಅನಂತರಾಜ್​ಗೆ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಿರುವುದು ಕೇಳಿಬಂದಿದೆ. ಅನಂತ್​ಗೆ ಯಾವುದೇ ಕಿರುಕುಳ ಕೊಡಬೇಡ. ನನಗೆ ಕೊಡು ನಾನು ದೂರ ಆಗುತ್ತೇನೆ ಎಂದು ರೇಖಾ ಗೋಗರೆಯುತ್ತಾಳೆ. ಇದಕ್ಕೆ ಅನಂತರಾಜು ಪತ್ನಿ, ಈಗಾಗಲೇ ಕೈ ಮುರಿದು, ಎದೆಗೆ ಹಲ್ಲೆ ನಡೆಸಿ ಆಸ್ಪತ್ರೆಗೆ ಸೇರಿಸಿದ್ದೆ. ಬೇಕಾದರೆ ವಾರ್ಡ್​ನ ಜನರನ್ನು ಕೇಳು. ನಂಬಿಕೆ ಇಲ್ಲವಾದರೆ, ವಿಡಿಯೋ ಕಾಲ್​ ಮಾಡಿ ಮಾತನಾಡು ಎಂದು ಸುಮಾ, ಹೇಳುವ ಮಾತುಗಳು ಕೇಳಿಬಂದಿವೆ. ಸ್ಥಳೀಯರಲ್ಲಿ ಪತ್ನಿ ಕಿರುಕುಳಕ್ಕೆ ಅನಂತರಾಜು​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿವೆ. ಪೊಲೀಸರು ಸಹ ಗಂಭೀರವಾಗಿ ಪರಿಗಣಿಸಿದ್ದು, ಆಡಿಯೋ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net