BJP ಮುಖಂಡನ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್​: ಪ್ಲೀಸ್​ ಅನಂತುಗೆ ಏನೂ ಮಾಡ್ಬೇಡಿ ಎಂದು ಆಕೆ ಕಣ್ಣೀರಿಟ್ಟರೂ ಪತ್ನಿ ಮನಸು ಕರಗಲಿಲ್ಲ...

1278448
Published on

ಬೆಂಗಳೂರು: ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಮುಖಂಡ ಅನಂತರಾಜು ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಆರಂಭದಲ್ಲಿ ಅನಾರೋಗ್ಯದಿಂದ ಬೇಸತ್ತು ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತಾದರೂ ಇದನ್ನು ಅಲ್ಲಗೆಳೆದಿದ್ದ ಪತ್ನಿ ಸುಮಾ, ನನ್ನ ಗಂಡನನ್ನು ಹನಿಟ್ರ್ಯಾಪ್​ ಮಾಡಿ ಕೊಂದಿದ್ದಾರೆ ಎಂದು ಮೂವರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು. ಪೊಲೀಸರು ಮೂವರು ಆರೋಪಿಗಳ ಪೈಕಿ ಪ್ರಮುಖ ಆರೋಪಿ ರೇಖಾ ಎಂಬಾಕೆಯನ್ನು ಬಂಧಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಆಡಿಯೋ ವೈರಲ್​ ಆಗಿದ್ದು, ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ. ಪತ್ನಿಯ ಕಿರುಕುಳ ಸಹಿಸಲಾಗದೆ ಅನಂತರಾಜು ಸಾವಿನ ಮನೆಯ ಕದ ತಟ್ಟಿದ್ದಾರೆಯೇ ಎಂಬ ಅನುಮಾನ ದಟ್ಟವಾಗಿದೆ. ಅಷ್ಟಕ್ಕೂ ಆ ಆಡಿಯೋದಲ್ಲಿ ಏನಿದೆ ಗೊತ್ತಾ?

ಹೇರೋಹಳ್ಳಿ ವಾರ್ಡ್​ನ ನಿವಾಸಿ, ಬಿಜೆಪಿ ಮುಖಂಡ ಅನಂತರಾಜು ಮೇ 12ರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಡರಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾವಿಗೂ ಮುನ್ನ ಅನಂತರಾಜು ಬರೆದಿಟ್ಟಿದ್ದ ಡೆತ್‌ನೋಟ್​ ಪತ್ನಿ ಸುಮಾ ಕೈಗೆ ಸಿಕ್ಕಿದೆ. ಆ ಡೆತ್​ನೋಟ್​ನಲ್ಲಿ ‘ಪ್ರಿಯ ಸುಮಾ, ನನ್ನನ್ನು ಕ್ಷಮಿಸಿಬಿಡು, ನಿನಗೆ ಮೋಸ ಮಾಡಿದ್ದೇನೆ. ನಿನ್ನಿಂದ ಕ್ಷಮೆ ಕೇಳಲು ಅರ್ಹನಲ್ಲ, ಹೆಣ್ಣಿನ ಸಹವಾಸ ಮಾಡಿ ಅವಳಿಂದ ಫೋಟೋ-ವಿಡಿಯೋಗಳ ಟ್ರ್ಯಾಪ್​ಗೆ ಸಿಲುಕಿ ನಿನಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊ’ ಎಂದಿದೆ. ಈ ಡೆತ್​ನೋಟ್​ ಹಿಡಿದು ಠಾಣೆ ಮೆಟ್ಟಿಲೇರಿದ್ದ ಸುಮಾ, 'ಕೆ.ಆರ್.ಪುರಂನ ನಿವಾಸಿ ರೇಖಾ ಮತ್ತು ಈಕೆಯ ಪತಿ ವಿನೋದ್ ಹಾಗೂ ಸ್ನೇಹಿತೆ ಸ್ಪಂದನ ಎಂಬುವವರು ನನ್ನ ಗಂಡನ ಅಶ್ಲೀಲ ಫೋಟೋಗಳನ್ನ ಇಟ್ಟುಕೊಂಡು ಬ್ಲಾಕ್​ಮೇಲ್ ಮಾಡುತ್ತಿದ್ದರು. ಫೇಸ್​ಬುಕ್​ ಮೂಲಕ ರೇಖಾಳ ಪರಿಚಯ ಅನಂತರಾಜು ಆಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ರೇಖಾ, ನನ್ನ ಗಂಡನ ಖಾಸಗಿ ಫೋಟೋ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಹಿಂಸಿಸಿದ್ದಳು. ಇವಳ ಕಾಟ ಸಹಿಸಲಾಗದೆ ಈ ಹಿಂದೆಯೂ ಆತ್ಮಹತ್ಯೆಗೆ ಅನಂತರಾಜು ಯತ್ನಿಸಿದ್ದರು. ಈ ವಿಚಾರ ಗೊತ್ತಾಗಿ ನನ್ನ ಗಂಡನಿಗೆ ಹೆದರಬೇಡಿ ಎಂದು ಧೈರ್ಯ ತುಂಬಿದ್ದೆ. ಆದರೂ ಆ ಗ್ಯಾಂಗ್​ ಬ್ಲ್ಯಾಕ್​ಮೇಲ್​ ಮಾಡುತ್ತಲೇ ಇತ್ತು. ಬೇಸತ್ತ ಅನಂತರಾಜು ನೇಣಿಗೆ ಶರಣಾಗಿದ್ದಾರೆ. ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಿ' ಎಂದು ದೂರು ನೀಡಿದ್ದಳು. ಆದರೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ. 'ನಾನೇ ಅನಂತರಾಜುಗೆ ಟಾರ್ಚರ್​ ಕೊಟ್ಟು ಸಾಯ್ತೀನಿ' ಎಂದು ಪತ್ನಿ ಸುಮಾ ಅವರೇ ರೇಖಾಗೆ ಹೇಳಿರುವ ಆಡಿಯೋ ವೈರಲ್​ ಆಗಿದೆ.

ಆಡಿಯೋದಲ್ಲಿ ಏನಿದೆ?:

ಸುಮಾ: ಇನ್ನೊಂದು ಇಪ್ಪತ್ತು ದಿನ ಬದುಕ್ತಾನಾ? ನಾನು ಕೊಡೋ ಟಾರ್ಚರ್​ಗೆ ಹಾರ್ಟ್​ಅಟ್ಯಾಕ್​ ಆಗಿ ಅವನು ಸಾಯ್ಬೇಕು. ಹಾಗೆ ಮಾಡ್ತೀನಿ....

ರೇಖಾ: ಸುಮಾ ಪ್ಲೀಸ್​... ಒಬ್ಬರ ಪ್ರಾಣ ತೆಗೆಯೋಕೆ ಹಕ್ಕು ಕೊಟ್ಟಿದ್ದು ಯಾರು ಸುಮಾ? ಪ್ಲೀಸ್​ ಸುಮಾ ಅವರಿಗೆ ಏನು ಮಾಡಬೇಡ.. ದೇವ್ರು ಬಿಡಲ್ಲ..

ಸುಮಾ: ಏಯ್​ ಮಾತಾಡೋ.. ಅವಳ ಟಾರ್ಚರ್​ ಸಹಿಸಲಾಗದೆ ಅವಳತ್ರ ಹೋಗ್ತಿದ್ದೆ ಅಂದ್ಯಲ್ಲೋ... ಮಾತಾಡೋ... ಬೊಗಳೋ... ನಿನಗೆ ಮಕ್ಕಳು ಬೇಡ... ಹೆಂಡ್ತೀನೂ ಬೇಡ.. ಸೂ* ಬೇಕು ಅಲ್ವೇನೋ... (ಫೋನ್​ ಸಂಭಾಷಣೆ ವೇಳೆಯೇ ಅನಂತರಾಜುಗೆ ಸುಮಾ ಬೈಯ್ಯುತ್ತಾ ಹೊಡೆಯುವ ಶಬ್ಧ ಕೇಳಿಸುತ್ತೆ)

ರೇಖಾ: ಸುಮಾ ಪ್ಲೀಸ್​ ಸುಮಾ... ಅವರಿಗೆ ಏನೂ ಮಾಡ್ಬೇಡ ಸುಮಾ, ನಿನ್ನ ಕಾಲು ಹಿಡ್ಕೋತೀನಿ ಸುಮಾ, ಐ ವೆರಿ ಸಾರಿ ಸುಮಾ, ಎಲ್ಲೋ ಒಂದು ಕಡೆ ಅವರು ಬದುಕಿದ್ದಾರೇನೋ ಅಂತ ನಾನು ದೂರ ಇರ್ತೀನಿ. ಪ್ಲೀಸ್​ ಸುಮಾ ಅವರಿಗೆ ಏನು ಮಾಡ್ಬೇಡ(ಕಣ್ಣೀರು ಹಾಕುತ್ತಾ ಮನವಿ ಮಾಡುತ್ತಿರುವುದು)

ಸುಮಾ: ಒಬ್ಬ ಮನುಷ್ಯನ ಜೀವನ ಹಾಳು ಮಾಡಿದ್ರಲ್ಲ ಇಬ್ರೂ ಸೇರಿ. 6 ವರ್ಷ ಸುಖ ಪಟ್ರಲ್ಲ ನೀವಿಬ್ರೂ...

ರೇಖಾ: ಅಮ್ಮ ತಾಯಿ ನಿಮ್ಮ ಜೀವನ ಸಹವಾಸಕ್ಕೆ ನಾನು ಬರಲ್ಲ, ನೆಮ್ಮದಿ ಕೊಡು...

ಸುಮಾ: ಬರ್ಲೇ ಬೇಕು, ನೀನ್ಯಾವಳೇ ಬರಲ್ಲ ಅನ್ನೋಕೆ, ಇವನು ನಮ್ಮನೆ ನಾಯಿ, ಸಾಯ್ತಿಸೋ ಬದುಕಿಸ್ತೋವೋ ಅದು ನನಗೆ ಬಿಟ್ಟಿದ್ದು. ಅವತ್ತು ಸಿಕ್ಕಾಕೊಂಡ್ನಲ್ಲ ಅವತ್ತೇ ನೆಮ್ಮದಿ ಹೋಯ್ತು... ನಿಮ್ಮಿಬ್ರುನೂ ದೂರ ಮಾಡಲ್ಲ, ಒಂದು ಮಾಡ್ತೀನಿ ಬಾ...

ರೇಖಾ: ಕ್ಷಮಿಸೋ ಧೈರ್ಯ ಮಾಡಲ್ವ ನೀನು.. ಪ್ಲೀಸ್​ ಸುಮಾ

ಸುಮಾ: ನಿನ್ನ ಇದ್ದು ಸಂತೋಷವಾಗಿದ್ನಲ್ಲೇ... ಸುಖ ಕೊಟ್ನಲ್ಲೇ... ಯಾಕೋ ಸಾಯಲಿಲ್ಲ 6 ವರ್ಷದಿಂದ ನೀನು...(ಗಂಡನಿಗೆ ಹೊಡೆಯುತ್ತಾ)

ರೇಖಾ: ಫೋನ್​ ಇಡ್ತೀನಿ ಸುಮಾ(ಅಳುತ್ತಾ)

ಸುಮಾ ಮತ್ತು ರೇಖಾ ನಡುವೆ ದೂರವಾಣಿಯಲ್ಲಿ ನಡೆದ ಸಂಭಾಷಣೆಯ ಆಡಿಯೋ ವೈರಲ್​​ ಆಗಿದೆ. ಅನಂತರಾಜುಗೆ ರೇಖಾ ಹನಿಟ್ರ್ಯಾಪ್​ ಮಾಡಿಲ್ಲ. 6 ವರ್ಷದಿಂದ ಅನಂತರಾಜು ಮತ್ತು ರೇಖಾ ನಡುವೆ ಸಂಬಂಧ ಇತ್ತು. ಈ ವಿಚಾರ ಸುಮಾಗೆ ಗೊತ್ತಾಗಿ ಟಾರ್ಚರ್​ ಕೊಟ್ಟು ನಾನೇ ಅನಂತರಾಜುನ ಸಾಯಿಸ್ತೀನಿ ಎಂದು ರೇಖಾಗೆ ಹೇಳಿರುವ ಮಾತು ಈ ಕೇಸ್​ಗೆ ಟ್ವಿಸ್ಟ್​ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net