

ದೊಡ್ಡಬಳ್ಳಾಪುರ: ಬೈಕ್ ಮೇಲೆ ಕ್ಯಾಂಟರ್ ಹರಿದು ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಸೋಮವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 207ರ ಚುಂಚೇಗೌಡನ ಹೊಸಹಳ್ಳಿ ಗೇಟ್ ಬಳಿ ಸಂಭವಿಸಿದೆ. ತನ್ನ ಕಣ್ಣೆದುರೇ ವಿಲವಿಲ ಒದ್ದಾಡಿ ಮಗ ಪ್ರಾಣಬಿಟ್ಟಿದ್ದ ನೋಡಿದ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ.
ಅಂಬಲಗೆರೆಯ ನಿವಾಸಿ ಸಿದ್ದಲಿಂಗಪ್ಪ ಅವರ ಮಗ ವರುಣ್(18) ಮೃತ ದುರ್ದೈವಿ. ದೊಡ್ಡಬಳ್ಳಾಪುರ ನಗರದ ಶ್ರೀವಾಣಿ ಕಾಲೇಜಿನಲ್ಲಿ ವರುಣ್ ಪಿಯುಸಿ ಓದುತ್ತಿದ್ದ. ಕಾಲೇಜಿಗೆ ಬಿಡಲೆಂದು ಸೋಮವಾರ ಬೆಳಗ್ಗೆ ಬೈಕ್ನಲ್ಲಿ ಮಗನನ್ನು ಕೂರಿಸಿಕೊಂಡು ತಂದೆ ಹೋಗುತ್ತಿದ್ದರು. ಮಾರ್ಗಮಧ್ಯೆ ಯಮರೂಪಿಯಾಗಿ ಬಂದ ಕ್ಯಾಂಟರ್, ಬೈಕ್ ಮೇಲೆ ಹರಿದಿದೆ. ತೀವ್ರ ಗಾಯಗೊಂಡ ಮಗ ಕ್ಷಣಾರ್ಧದಲ್ಲೇ ಮೃತಪಟ್ಟಿದ್ದು, ಅತ್ತ ಗಾಯಗೊಂಡ ಅಪ್ಪ, ಮಗನ ರಕ್ಷಣೆಗಾಗಿ ಹಾತೊರೆದರೂ ಫಲಿಸಲಿಲ್ಲ.
ಅಪಘಾತ ನಂತರ ಪರಾರಿಯಾಗುತ್ತಿದ್ದ ಕ್ಯಾಂಟರ್ ಚಾಲಕನನ್ನು ಹಿಡಿದ ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.