

ಬೆಂಗಳೂರು: ನನಗೆ ಅವನು, ಅವನಿಗೆ ನಾನು ಅನ್ನೋ ರೀತಿ ಬದುಕಿದ್ವಿ. ಎರಡು ದಿನದ ಹಿಂದಷ್ಟೇ ಮಗನೇ ನೀ ಇದ್ರೇನೇ ನಾನು, ಗುಂಡಿ ಇದೆ ರಸ್ತೇಲಿ ಹೋಗ್ವಾಗ ಜೋಪಾನ ಎಂದಿದ್ದೆ.... ಇದೀಗ ಅದೇ ಗುಂಡಿಗೆ ಬಿದ್ದು ನನ್ನ ಮಗ ಬಾರದ ಲೋಕಕ್ಕೆ ಹೋಗಿಬಿಟ್ಟ...
ಇದು ಬೆಂಗಳೂರಿನ ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ಬಳಿ ರಸ್ತೆಗುಂಡಿಗೆ ಬಲಿಯಾದ ಯುವಕ ಅಶ್ವಿನ್ರ ತಾಯಿ ವಸುಧಾ ರೋಧಿಸುತ್ತಿದ್ದ ಪರಿ. ಇದ್ದೊಬ್ಬ ಮಗನನ್ನು ಕೆಳೆದುಕೊಂಡ ಹೆತ್ತಮ್ಮನ ಗೋಳಾಟ ನೋಡಲಾಗ್ತಿಲ್ಲ. ಯಾವ ತಾಯಿಗೂ ಈ ನೋವು ಬೇಡ. ಅವನ ದುಡಿಮೆಯಿಂದಲೇ ಮನೆ ನಡೀತಿತ್ತು. ನಾನಿವಾಗ ಯಾರಿಗೋಸ್ಕರ ಬದುಕಬೇಕು? ಅಯ್ಯೋ ಕಂದ ಇಷ್ಟು ಚಿಕ್ಕ ವಯಸ್ಸಿಗ್ಗೇ ಹೋಗಿಬಿಟ್ಯಲ್ಲಪ್ಪಾ... ಎಂದು ಕಣ್ಣೀರಿಡುತ್ತಿದ್ದಾರೆ. ಬಿಡಬ್ಲ್ಯುಎಸ್ಎಸ್ಬಿ ಅವರು ರಸ್ತೆಬದಿ ಅಗೆದಿದ್ದ ಗುಂಡಿಗೆ ಬಿದ್ದ ಅಶ್ವಿನ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಹಾವೇರಿ ಮೂಲದ 27 ವರ್ಷದ ಅಶ್ವಿನ್, ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು. ಭಾನುವಾರ ರಾತ್ರಿ ಬೈಕ್ನಲ್ಲಿ ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ಕಡೆ ಹೋಗುವಾಗ ರಸ್ತೆಗುಂಡಿಯಲ್ಲಿ ಬಿದ್ದು, ತೀವ್ರಗಾಯಗೊಂಡಿದ್ದರು. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅಶ್ವಿನ್, ಸೋಮವಾರ ಮುಂಜಾನೆ ಕೊನೆಯುಸಿರೆಳೆದರು.
ಅತ್ತ ಅಶ್ವಿನ್ರ ಸ್ನೇಹಿತರು, ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಅಧಿಕಾರಿಗಳೇ ಹೊಣೆ. ಅಶ್ವಿನ್ರ ಜೀವ ಹೋಯ್ತಲ್ಲ, ಇದಕ್ಕೆ ಯಾರು ಹೊಣೆ? ಭ್ರಷ್ಟ ಅಧಿಕಾರಿಗಳ ಕೆಲಸಕ್ಕೆ ಇನ್ನೆಷ್ಟು ಅಮಾಯಕರು ಬಲಿಯಾಗಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.(ದಿಗ್ವಿಜಯ ನ್ಯೂಸ್)