ಮದ್ವೆ ಮಂಟಪವೆಲ್ಲ ಅಪ್ಪು ಮಯ! ನವ ಜೋಡಿಯ ಅಭಿಮಾನ ಕಂಡು ಭಾವುಕರಾದ ಬಂಧು-ಬಳಗ

1209636
Published on

ಬಾಗಲಕೋಟೆ: ಅವರಿಬ್ಬರಿಗೂ ನಟ ಪುನೀತ್​ ರಾಜ್​ಕುಮಾರ್​ ಅಂದ್ರೆ ತುಂಬಾ ಇಷ್ಟ. ಅಪ್ಪು ಅಗಲಿಕೆ ನೋವಿನಲ್ಲೇ ಇದ್ದ ಈ ಜೋಡಿ, ತಮ್ಮ ಮದುವೆಯ ಲಗ್ನ ಪತ್ರಿಕೆಯಲ್ಲೂ ಅಪ್ಪು ಭಾವಚಿತ್ರ ಹಾಕಿಸಿ, 'ಜೊತೆಗಿರುವ ಜೀವಾ ಎಂದೆಂದಿಗೂ ಜೀವಂತ... ಅಪ್ಪು ಅಮರ' ಎಂಬ ಅಡಿಬರಹ ಹಾಕಿಸಿಕೊಂಡಿದ್ದರು. ಕೊನೆಗೆ ಅಪ್ಪು ಭಾವಚಿತ್ರ ಇಟ್ಟುಕೊಂಡೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಧು-ವರರಿಗೆ ಇರುವ ಅಪ್ಪು ಮೇಲಿನ ಅಭಿಮಾನ, ಮದುವೆ ಮಂಟಪದಲ್ಲಿ ರಾರಾಜಿಸುತ್ತಿದ್ದ ಅಪ್ಪು ಬ್ಯಾನರ್​, ಫೋಟೋ, ಕಟೌಟ್​ ನೋಡಿದ ಸಂಬಂಧಿಕರು ಭಾವುಕರಾದರು.

ಇಂತಹ ವಿಶೇಷ ಮದುವೆ ಬಾದಾಮಿ ತಾಲೂಕಿನ ಹೊಸೂರ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆಯಿತು. ಹೊಸೂರ ಗ್ರಾಮದ ಶ್ರೀಧರ ಇರಸನಾಳ ಹಾಗೂ ಬಾಗಲಕೋಟೆ ತಾಲೂಕಿನ ಕಿರಸೂರ ಗ್ರಾಮದ ಸವಿತಾ(ಪೂರ್ಣಿಮಾ) ಈರಗಾರ ಇವಬ್ಬರು ಅಪ್ಪು ಸ್ಮರಿಸುತ್ತಲೇ ದಾಂಪತ್ಯಕ್ಕೆ ಕಾಲಿಟ್ಟರು.

ಮದುವೆ ಮಂಟಪವೆಲ್ಲ ಅಪ್ಪು ಮಯವಾಗಿತ್ತು... ಮದುವೆ ಮಂಟಪದ ಪ್ರವೇಶದ್ವಾರದಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಬೃಹತ್ ಕಟೌಟ್ ಕಂಗೊಳಿಸುತ್ತಿತ್ತು. ಒಳ ಪ್ರವೇಶಿಸುತ್ತಿದ್ದಂತೆ ಬ್ಯಾನರ್, ಫೋಟೋದಲ್ಲೂ ಅಪ್ಪು. ಪ್ರವೇಶದಲ್ಲಿ ಅಪ್ಪು ನಗುವಿನ ಭಾವಚಿತ್ರವನ್ನ ಇಡಲಾಗಿತ್ತು. ಮದುವೆಗೆ ಬಂದ ಬಂಧು-ಮಿತ್ರರು ಎಲ್ಲರೂ ಮೊದಲು ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ನವ ಜೋಡಿಗೆ ಅಕ್ಷತೆ ಹಾಕಿ ಶುಭ ಹಾರೈಸುವ ವ್ಯವಸ್ಥೆ ಮಾಡಲಾಗಿತ್ತು. ಮದುಮಕ್ಕಳು ಕೂರುವ ಜಾಗದಲ್ಲಿ ಅಪ್ಪು ಭಾವಚಿತ್ರದ ಬ್ಯಾನರ್ ಹಾಕಲಾಗಿತ್ತು. ಇದೆಲ್ಲವನ್ನೂ ನೋಡುತ್ತಿದ್ದರೆ ಸಾಕ್ಷಾತ್​ ಪುನೀತ್ ರಾಜ್​ಕುಮಾರ್​ ಅವರೇ ಈ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಭಾಸವಾಗುತ್ತಿತ್ತು. ​ಸ್ವರ್ಗದಿಂದಲೇ ಈ ನವಜೋಡಿಗೆ ಅಪ್ಪು ಆಶೀರ್ವಾದ ಮಾಡಿದ್ದಾರೆ ಎಂದು ಅಲ್ಲಿ ನೆರೆದಿದ್ದ ಜನ ಮಾತಾಡುತ್ತಿದ್ದ ದೃಶ್ಯ ಮತ್ತಷ್ಟು ಭಾವುಕರನ್ನಾಗಿಸುತ್ತಿತ್ತು.

ನವ ಜೋಡಿ ಶ್ರೀಧರ ಮತ್ತು ಸವಿತಾ ಇಬ್ಬರು ಮಾತ್ರವಲ್ಲ ಎರಡೂ ಕುಟುಂಬಸ್ಥರೂ ನಟ ಪುನೀತ್​ ರಾಜ್​ಕುಮಾರ್​ ಅವರ ಕಟ್ಟಾ ಅಭಿಮಾನಿಗಳು. ಹೀಗಾಗಿ ಮಕ್ಕಳ ಮದುವೆಯಲ್ಲೂ ಅಪ್ಪು ಸ್ಮರಣೆ ಕಾರ್ಯ ನಡೆಸಿದ್ದಾರೆ. ಪುನೀತ್​ರ ಆದರ್ಶ, ಸೇವಾ ಕಾರ್ಯಗಳು ಪ್ರತಿಯೊಬ್ಬರಿಗೂ ಪ್ರೇರಣೆ ಆಗಬೇಕು ಎಂಬುದು ಇವರ ಆಶಯ.

ಇನ್ನು ಹೊಸೂರ ಗ್ರಾಮದ ಗ್ರಾಮಸ್ಥರಿಗೂ ಅಪ್ಪು ಅಂದ್ರೆ ತುಂಬಾ ಇಷ್ಟ. ಅವರ ಅಗಲಿಕೆ ನೋವಿನಲ್ಲೇ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಅಪ್ಪುಗಾಗಿ ಮಿನಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲ, ಗ್ರಾಮದ ವಾರದ ಸಂತೆಯ ಜಾಗಕ್ಕೆ ಪುನೀತ್ ರಾಜಕುಮಾರ್ ಸಂತೆ ಮಾರುಕಟ್ಟೆ ಎಂದು ನಾಮಕರಣವನ್ನೂ ಮಾಡಿರುವುದು ಗಮನಾರ್ಹ.

ಶ್ರೀಧರ ಇರಸನಾಳ ಮತ್ತು ಸವಿತಾ(ಪೂರ್ಣಿಮಾ) ಈರಗಾರ ಅವರ ಮದುವೆ ಆಹ್ವಾನ ಪತ್ರಿಕೆಯಲ್ಲೂ ಪುನೀತ್ ರಾಜ್​ಕುಮಾರ್​ ಅವರ ಫೋಟೋ ಹಾಕಿಸಿರುವುದು.
ಶ್ರೀಧರ ಇರಸನಾಳ ಮತ್ತು ಸವಿತಾ(ಪೂರ್ಣಿಮಾ) ಈರಗಾರ ಅವರ ಮದುವೆ ಆಹ್ವಾನ ಪತ್ರಿಕೆಯಲ್ಲೂ ಪುನೀತ್ ರಾಜ್​ಕುಮಾರ್​ ಅವರ ಫೋಟೋ ಹಾಕಿಸಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net