ಮೈಸೂರು ವಿವಿ ವಿದ್ಯಾರ್ಥಿಗಳಿಗೆ ಪುನೀತ್​, ಪಾರ್ವತಮ್ಮ ರಾಜ್​ಕುಮಾರ್​ ಹೆಸರಲ್ಲಿ 2 ಚಿನ್ನದ ಪದಕ: ಅಶ್ವಿನಿ ಘೋಷಣೆ

puneeth rajkumar
Published on

ಮೈಸೂರು: ಪುನೀತ್​ ರಾಜ್​ಕುಮಾರ್​ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಅವರ ಹೆಸರಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಎರಡು ಚಿನ್ನದ ಪದಕ ನೀಡುವುದಾಗಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಘೋಷಣೆ ಮಾಡಿದರು.

ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವ ಸಮಾರಂಭದಲ್ಲಿ ನಟ ಪುನೀತ್​ ರಾಜ್​ಕುಮಾರ್(ಮರಣೋತ್ತರ) ಅವರಿಗೆ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಅಶ್ವಿನಿ ಸ್ವೀಕರಿಸಿದರು. ಇದೇ ವೇಳೆ ಮಾತನಾಡಿದ ಅಶ್ವಿನಿ, ಡಾ.ಪುನೀತ್ ರಾಜ್​ಮಾರ್ ಮತ್ತು ಪಾರ್ವತಮ್ಮ ರಾಜ್​ಕುಮಾರ್​ ಅವರ ಸ್ಮರಣಾರ್ಥ ಪ್ರತಿ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2 ಚಿನ್ನದ ಪದಕ ನೀಡುವುದಾಗಿ ಹೇಳಿದರು. ಪುನೀತ್​ ಅವರ ಹೆಸರಲ್ಲಿ ಲಲಿತಾಕಲಾ ವಿಭಾಗಕ್ಕೆ ಒಂದು ಚಿನ್ನದ ಪದಕ, ಪಾರ್ವತಮ್ಮ ರಾಜ್​ಕುಮಾರ್​ ಅವರ ಹೆಸರಿನಲ್ಲಿ ಬಿಸಿನೆಸ್ ಮ್ಯಾನೇಜ್‌ಮೆಂಟ್‌ ವಿಭಾಗಕ್ಕೆ ಒಂದು ಚಿನ್ನದ ಪದಕ ಸ್ಥಾಪಿಸುವುದಾಗಿ ಘೋಷಿಸಿದರು. ಆಯಾ ವಿಭಾಗದಲ್ಲಿ ರ್ಯಾಂಕ್​ ಪಡೆದ ವಿದ್ಯಾರ್ಥಿಗಳಿಗೆ ಪದಕ ಕೊಡಲಾಗುತ್ತದೆ.

ಮೈಸೂರು ವಿವಿಯ ಕ್ರಾಫಾರ್ಡ್ ಹಾಲ್​ನಲ್ಲಿ ಮಂಗಳವಾರ ನಡೆದ ಘಟಿಕೋತ್ಸವ ಸಮಾರಂಭಕ್ಕೆ ಡಾ.ರಾಜ್​ಕುಮಾರ್ ಕುಟುಂಬಸ್ಥರು ಆಗಮಿಸಿದ್ದರು. ನಟ ರಾಘವೇಂದ್ರ ರಾಜ್​ಕುಮಾರ್ ಮತ್ತು ಪತ್ನಿ ಮಂಗಳಾ, ನಟ ವಿನಯ್ ರಾಜ್​ಕುಮಾರ್, ಪುನೀತ್​ರ ಅಕ್ಕ ಲಕ್ಷ್ಮೀ ಗೋವಿಂದು ಮತ್ತು ಮೊಮ್ಮಕ್ಕಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net