ಇದು JAMES ರಹಸ್ಯ: ನಿಮ್ಮ ಕಣ್ಣಲ್ಲಿ ನೀರು ತರಿಸುತ್ತೆ ಶೈನ್​ ಶೆಟ್ಟಿ ಬಿಚ್ಚಿಟ್ಟ ರೀಲ್​ ಮತ್ತು ರಿಯಾಲಿಟಿ

james appu puneeth
Published on

ಬೆಂಗಳೂರು: ಪುನೀತ್​ ರಾಜ್​ಕುಮಾರ್​ ಅವರ ಕೊನೇ ಚಿತ್ರ ಜೇಮ್ಸ್​ ಸಿನಿಮಾ ನೋಡಿದವರಿಗೆ ಈಗಾಗಲೇ ರೀಲ್​ ಮತ್ತು ರಿಯಾಲಿಟಿ ರಹಸ್ಯ ಗೊತ್ತಾಗಿರುತ್ತೆ. ಯಾರೂ ಊಹಿಸಿರದ, ಅನಿರೀಕ್ಷಿತ ದುರ್ಘಟನೆಯೊಂದು ಸಂಭವಿಸಿ ಹೋಗಿದೆ. ಅಪ್ಪು ನಮ್ಮನ್ನು ಅಗಲಿ 4 ತಿಂಗಳು ಕಳೆದರೂ ಅಭಿಮಾನಿಗಳ ಮನದಲ್ಲಿ ಮಡುಗಟ್ಟಿರುವ ನೋವು ಇನ್ನೂ ಕರಗಿಲ್ಲ. ಅಪ್ಪು ಅವರ ಕೊನೇ ಚಿತ್ರ ಜೇಮ್ಸ್​ ಮಾ.17ರಂದು ವಿಶ್ವಾದ್ಯಂತ ತೆರೆಕಂಡಿದ್ದು, ಭಾರವಾದ ಮನಸ್ಸಿನಲ್ಲೇ ಸಿನಿಮಾ ನೋಡುತ್ತಿದ್ದಾರೆ. ಅಪ್ಪು ನೆನೆದು ಕಣ್ಣೀರಿಡುತ್ತಿದ್ದಾರೆ. ಈ ನೋವು ಜೇಮ್ಸ್​ ತಂಡಕ್ಕೂ ಹೊರತಾಗಿಲ್ಲ. ಜೇಮ್ಸ್​ ಸಿನಿಮಾದಲ್ಲಿ ಅಪ್ಪು ಸ್ನೇಹಿತನ ಪಾತ್ರ ಮಾಡಿರುವ ನಟ ಶೈನ್​ ಶೆಟ್ಟಿ 'JAMES'ನ ರೀಲ್​ ಮತ್ತು ರಿಯಲ್​ ರಹಸ್ಯ ಬಿಚ್ಚಿಟ್ಟಿದ್ದಾರೆ.

ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಶೈನ್​ ಶೆಟ್ಟಿ, 'ಜೇಮ್ಸ್​ ಸಿನಿಮಾದಲ್ಲಿ ನಾವು ಐದು ಜನ J.A.M.E.S.(ಜೇಮ್ಸ್​) ಸ್ನೇಹಿತರು. ಅದರಲ್ಲಿ 'S' ಅಂದ್ರೆ ಸಂತೋಷ್​. ನಾವು ನಾಲ್ಕು ಜನ(J.A.M.E.) ಸತ್ತೋಗ್ತೀವಿ. ಅಪ್ಪು ಸರ್(ಸಂತೋಷ್​)​ ಒಬ್ಬರು ಉಳಿದುಕೊಳ್ತಾರೆ. ನಿಜ ಜೀವನದಲ್ಲಿ ನಾವು ನಾಲ್ಕು ಜನ ಉಳ್ಕೊಂಡಿದ್ದೀವಿ. ಆದರೆ ಅಪ್ಪು ಸರ್​ ಇಲ್ಲ. ಪ್ರೀ ರಿಲೀಸ್​ ಕೂಡ ಅದೇ ಗ್ರೌಂಡ್​ನಲ್ಲಿ ಆಯ್ತು...' ಎನ್ನುತ್ತಲೇ ಭಾವುಕರಾದರು.

'ಜೇಮ್ಸ್​ ಸಿನಿಮಾ ಶೂಟಿಂಗ್​ ನನಗೆ ಶೂಟಿಂಗ್​ ಅನ್ನಿಸಲೇ ಇಲ್ಲ. ನಾವೆಲ್ಲ ಅಪ್ಪು ಸರ್​ ಜತೆ 13 ದಿನ ಇದ್ವಿ ಅನ್ನಿಸುತ್ತಿತ್ತು. ನಾನು ಅಪ್ಪು ವ್ಯಕ್ತಿತ್ವಕ್ಕೆ ನಾನು ಅಭಿಮಾನಿ ಆದೆ. ಪುನೀತ್​ ಸರ್ ಜತೆ ಶುರುವಾದ ನನ್ನ ಜರ್ನಿ ಕೊನೆಗೆ ಅಪ್ಪು ಅಣ್ಣಾ ಎನ್ನುವ ತನಕ ಬಂತು. ಅವರ ಮೊದಲ ನೋಟದಲ್ಲೇ ಇಂಪ್ರೆಷನ್​ ಆಗಿಬಿಡ್ತೀವಿ. ''ಏನ್​ ಮಾಡ್ತಾ ಇದ್ದೀರಿ ಶೈನ್​ ನೀವು?'' ಅಂತ ಅಪ್ಪು ಸರ್​ ಕೇಳಿದ್ರು. ಸಣ್ಣದೊಂದು ಹೋಟೆಲ್​ ಮಾಡಿದ್ದೀನಿ, ದಸರಾ ಹಬ್ಬದ ದಿನ ಉದ್ಘಾಟನೆ ಇದೆ ಅಂದೆ. ''ಓಹ್​ ನೀವು ನನ್ನ ಕರೆಯಲ್ವಾ'' ಅಂದ್ರು. ಸರ್​ ದೊಡ್ಡ ಹೋಟೆಲ್​ ಮಾಡಿದಾಗ ಕರೀತಿನಿ ಅಂದೆ. ''ಹೇ ಇದಕ್ಕೂ ಬರ್ತೀನಿ'' ಅಂದ್ರು. ನನಗೆ ಖುಷಿ ಜತೆಗೆ ಶಾಕ್​ ಆಯ್ತು. ದೊಡ್ಡ ನಟ ನನ್ನ ಹೋಟೆಲ್​ಗೆ ಬಂದು ಉದ್ಘಾಟನೆ ಮಾಡಿದ್ರು... ಇದು ನನ್ನ ಪುಣ್ಯ' ಎನ್ನುತ್ತಲೇ ಶೈನ್​ ಶೆಟ್ಟಿ ಭಾವುಕರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net