ಒಳ್ಳೇದಾಗ್ಲಿ ನನ್​​ ಕಂದನಿಗೆ... ಅಪ್ಪು‌ ಸಾವಿನ ಸುದ್ದಿ ಗೊತ್ತಿಲ್ದೆ ಬರ್ತ​ಡೇ, ಜೇಮ್ಸ್‌ಗೆ ಶುಭಕೋರಿದ‌ ಸೋದರತ್ತೆ

puneeth rajkumar
Published on

ಚಾಮರಾಜನಗರ: ಇಳಿ ವಯಸ್ಸು, ಅನಾರೋಗ್ಯದ ಹಿನ್ನೆಲೆಯಲ್ಲಿ ಕುಟುಂಬದವರಿಂದ ನಟ ಪುನೀತ್‌ರಾಜ್‌ಕುಮಾರ್ ಸಾವಿನ ಸುದ್ದಿ ತಿಳಿಯದ ಡಾ.ರಾಜ್ ಸಹೋದರಿ ನಾಗಮ್ಮ ಅಪ್ಪು ಜನ್ಮದಿನ ಮತ್ತು ಜೇಮ್ಸ್ ಚಿತ್ರಕ್ಕೆ ಶುಭಕೋರಿ ‘ಒಳ್ಳೇದಾಗ್ಲಿ ನನ್​ ಕಂದನಿಗೆ..’ ಎಂದು ಹರಸಿ, ಆರ್ಶೀವದಿಸಿ ಕೈಮುಗಿದಿದ್ದಾರೆ. ಈ ದೃಶ್ಯ ನೋಡಿದ್ರೆ ಮನಕಲಕುತ್ತೆ.

ದೊಡ್ಡಗಾಜನೂರಿನ ನಿವಾಸದಲ್ಲಿ ಕುಟುಂಬಸ್ಥರು ನಾಗಮ್ಮ ಅವರಿಂದ ಸೋದರ ಅಳಿಯ ಪುನೀತ್‌ಗೆ ಶುಭಾಶಯ ಹೇಳಿಸಿದ್ದಾರೆ. ಇದನ್ನು ವಿಡಿಯೋ ಮಾಡಲಾಗಿದ್ದು, 'ಮಾ.17ರಂದು ಅಪ್ಪು ಅಣ್ಣನ ಚಿತ್ರ ತೆರೆ ಕಾಣುತ್ತಿದೆ. ಅದರ ಹೆಸರು ಜೇಮ್ಸ್ ಅಂತ. ಹುಟ್ಟುಹಬ್ಬದ ದಿನವೇ ಚಿತ್ರ ತೆರೆಕಾಣುತ್ತಿದ್ದು, ಅವರಿಗೆ ಶುಭಕೋರಿ' ಎಂದು ನಾಗಮ್ಮಗೆ ಮೊಮ್ಮಗಳು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಾಗಮ್ಮ, ‘ಒಳ್ಳೆಯದಾಗಲಿ ನನ್ನ ಕಂದನಿಗೆ' ಎನ್ನುತ್ತಾ ದೃಷ್ಟಿ ನೀವಾಳಿಸಿ, 'ಬಹಳ ಸಂತೋಷವಾಯಿತು. ಜೇಮ್ಸ್ ಅಂತನಾ ಚಿತ್ರದ ಹೆಸರು. ನಾನು ನೋಡಿಲ್ಲ ಅಪ್ಪುಗೆ ಹುಟ್ಟುಹಬ್ಬದ ಶುಭಾಶಯ’ ಎಂದು ಹೇಳಿದ್ದಾರೆ.

95ಕ್ಕೂ ಹೆಚ್ಚು ವಯಸ್ಸಾಗಿರುವ ನಾಗಮ್ಮ ಅವರಿಗೆ ವಯೋಸಹಜ ಅನಾರೋಗ್ಯ ಕಾಡುತ್ತಿದ್ದೆ. ಇಂತಹ ಸ್ಥಿತಿಯಲ್ಲಿ ಅಪ್ಪು ಸಾವಿನ ಸುದ್ದಿ ಅವರಿಗೆ ಅಘಾತ ಉಂಟು ಮಾಡುತ್ತದೆ. ಸಾವಿನ ಸುದ್ದಿಯನ್ನು ಕೇಳುವ ಸ್ಥಿತಿಯಲ್ಲಿ ಅವರಿಲ್ಲ. ಪುನೀತ್‌ರನ್ನು ಇವರು ನೆನಪಿಸಿಕೊಂಡಾಗಲೆಲ್ಲಾ ಮನೆಯಲ್ಲಿ ಸಿನಿಮಾಗಳನ್ನು ಹಾಕಿ ತೋರಿಸಿ ಇಂದೋ ನಾಳೆಯೋ ಬರುತ್ತಾರೆ. ಚಿತ್ರೀರಕರಣದಲ್ಲಿ ಬಿಜಿ ಇದ್ದಾರೆ ಎಂದು ಹೇಳಿ ಕುಟುಂಬಸ್ಥರು ಸಮಾಧಾನ ಮಾಡುತ್ತಿದ್ದಾರೆ.

ಈಗ ವಿಡಿಯೋ ಮಾಡಿ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಿಸಿ ನಾಗಮ್ಮ ನೆನಪಿನಲ್ಲಿ ಅಪ್ಪು ಜೀವಂತಿಕೆಯನ್ನು ಕಾಪಾಡಿಕೊಳ್ಳಲು ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ನಾಗಮ್ಮ ಅಪ್ಪುಗೆ ಶುಭಕೋರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net