

ಮೈಸೂರು: ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವ ಸಮಾರಂಭದಲ್ಲಿ ನಟ ಪುನೀತ್ ರಾಜ್ಕುಮಾರ್(ಮರಣೋತ್ತರ), ವಿಜ್ಞಾನಿ ಡಾ.ವಿ.ಕೆ.ಆತ್ರಿ ಮತ್ತು ಜಾನಪದ ಕಲಾವಿದ ಎಂ.ಮಹದೇವಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಅಪ್ಪು ಅವರಿಗೆ ಮರಣೋತ್ತರವಾಗಿ ನೀಡಿದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಸ್ವೀಕರಿಸಿದರು.
ಮೈಸೂರು ವಿವಿಯ ಕ್ರಾಫಾರ್ಡ್ ಹಾಲ್ನಲ್ಲಿ ಮಂಗಳವಾರ ಘಟಿಕೋತ್ಸವ ಸಮಾರಂಭ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಡಾ.ರಾಜ್ಕುಮಾರ್ ಕುಟುಂಬಸ್ಥರು ಆಗಮಿಸಿದರು. ನಟ ರಾಘವೇಂದ್ರ ರಾಜ್ಕುಮಾರ್ ಮತ್ತು ಪತ್ನಿ, ನಟ ವಿನಯ್ ರಾಜ್ಕುಮಾರ್, ಪುನೀತ್ರ ಅಕ್ಕ ಲಕ್ಷ್ಮೀ ಗೋವಿಂದು ಮತ್ತು ಮೊಮ್ಮಕ್ಕಳು ಉಪಸ್ಥಿತರಿದ್ದರು.
ಇತ್ತೀಚೆಗೆ ಅಶ್ವಿನಿ ಅವರನ್ನು ಭೇಟಿಯಾಗಿದ್ದ ಕುಲಪತಿ ಪ್ರೊ.ಹೇಮಂತ್ ಕುಮಾರ್ ನೇತೃತ್ವದ ನಿಯೋಗ, ಪುನೀತ್ ಅವರಿಗೆ ಗೌರವ ಡಾಕ್ಟರೇಟ್ ಕೊಡುವ ಬಗ್ಗೆ ಚರ್ಚಿಸಿತ್ತು. ಶತಮಾನೋತ್ಸವ ಪೂರೈಸಿರುವ ಮೈಸೂರು ವಿವಿಯು ಈ ಬಾರಿ ಅಪ್ಪು ಅವರಿಗೆ ಡಾಕ್ಟರೇಟ್ ಪದವಿ ಕೊಟ್ಟದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಪುನೀತ್ ರಾಜ್ಕುಮಾರ್(ಮರಣೋತ್ತರ), ವಿಜ್ಞಾನಿ ಡಾ.ವಿ.ಕೆ.ಆತ್ರಿ ಮತ್ತು ಜಾನಪದ ಕಲಾವಿದ ಎಂ.ಮಹದೇವಸ್ವಾಮಿ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.