

ಬೆಂಗಳೂರು: ಬೆಳ್ಳಂದೂರಿನ ಅರ್ಚನಾ ರೆಡ್ಡಿ ಕೊಲೆ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದೆ. 2ನೇ ಗಂಡ ಇದ್ದರೂ ರೌಡಿ ಜತೆ ಅರ್ಚನಾ ಅಕ್ರಮ ಸಂಬಂಧ ಹೊಂದಿದ್ದೇ ಕೊಲೆಗೆ ಕಾರಣವಾಯ್ತೆ? ಎಂಬ ಅನುಮಾನ ದಟ್ಟವಾಗಿದ್ದೆ. ಅಷ್ಟೇ ಅಲ್ಲ, ಈ ಕೇಸ್ನಲ್ಲಿ ಅರ್ಚನಾಳ ಮಗಳ ಹೆಸರೂ ತಳಕು ಹಾಕಿಕೊಂಡಿದೆ.
ಸೋಮವಾರ(ಡಿ.27) ಜಿಗಣಿ ಪುರಸಭೆ ಚುನಾವಣೆಯ ಮತದಾನ ಮುಗಿಸಿ ಕಾರಿನಲ್ಲಿ ಮನೆಗೆ ಹೋಗುತ್ತಿದ್ದ ಅರ್ಚನಾ ರೆಡ್ಡಿ(32)ಯನ್ನು ಹೊಸೂರು ರಸ್ತೆ ಹೊಸರಸ್ತೆ ಜಂಕ್ಷನ್ನಲ್ಲಿ ಅಡ್ಡಗಟ್ಟಿದ ಈಕೆಯ 2ನೇ ಪತಿ ನವೀನ್ ಕುಮಾರ್ ಮತ್ತು ಈತನ ಸಹಚರರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಅತ್ತ ತಾಯಿ ಅರ್ಚನಾಳ ಹತ್ಯೆ ನಂತರವೂ ಮಗಳು ಯುವಿಕಾ, ಮಲತಂದೆ ನವೀನ್ ಜತೆ ಇದ್ದಳು ಎಂಬ ಮಾಹಿತಿ ಲಭ್ಯವಾಗಿದ್ದು, ತಾಯಿ ಕೊಲೆಯಾಗೋ ಬಗ್ಗೆ ಮಗಳಿಗೆ ಮೊದಲೇ ತಿಳಿದಿತ್ತಾ? ಹಂತಕರಿಗೆ ತಾಯಿ ಬಗ್ಗೆ ಮಾಹಿತಿ ಕೊಟ್ಟಳಾ ಯುವಿಕಾ ರೆಡ್ಡಿ? ಎಂಬಿತ್ಯಾದಿ ಶಂಕೆ ವ್ಯಕ್ತವಾಗಿದ್ದು, ಯುವಿಕಾ ರೆಡ್ಡಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಅರ್ಚನಾ ರೆಡ್ಡಿ ಹೆಸರಲ್ಲಿ 30-40 ಕೋಟಿ ಮೌಲ್ಯದ ಆಸ್ತಿ ಇದೆ ಎನ್ನಲಾಗಿದೆ. ನವೀನ್ಗೂ ಮೊದಲು ಅರ್ಚನಾಗೆ ಅರವಿಂದ್ ಎಂಬಾತನ ಜತೆ ಮದುವೆ ಆಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 5 ವರ್ಷದ ಹಿಂದೆ ಮೊದಲ ಪತಿಯಿಂದ ದೂರವಾಗಿ ಆರೋಪಿ ನವೀನ್ ಜತೆಗೆ ಬೆಳ್ಳಂದೂರಿನ ಪ್ಲ್ಯಾಟ್ನಲ್ಲಿ ವಾಸಿಸುತ್ತಿದ್ದ ಅರ್ಚನಾ, ಈತನನ್ನೇ ಮದುವೆ ಆಗಿದ್ದರು. ಆಸ್ತಿ ಹಾಗೂ ಅಕ್ರಮ ಸಂಬಂಧದ ವಿಚಾರವಾಗಿ ನವೀನ್ ಮತ್ತು ಅರ್ಚನಾ ನಡುವೆ ಜಗಳ ನಡೆಯುತ್ತಿತ್ತು. ಅರ್ಚನಾ ಕುಖ್ಯಾತ ರೌಡಿ ಜತೆಗೆ ಅಕ್ರಮ ಸಂಬಂಧ ಹೊಂದಿರುವ ಮಾತುಗಳು ಕೇಳಿ ಬರುತ್ತಿದ್ದವು. ಅರ್ಚನಾ ದೂರ ಆಗುತ್ತಿದ್ದಂತೆ ಆಕೆಯ ಮಗಳ ಜತೆ ನವೀನ್ ಸಲುಗೆ ಬೆಳೆಸಿದ್ದ. ಅಲ್ಲದೆ, ರೌಡಿಯ ಜತೆ ಪತ್ನಿ ಆತ್ಮೀಯವಾಗಿರುವುದನ್ನು ಸಹಿಸದೆ ಆಕೆಯನ್ನು ಹತ್ಯೆ ಮಾಡಲು ನವೀನ್ ಸಂಚು ರೂಪಿಸಿದ್ದ.
ಸೋಮವಾರ ಜಿಗಣಿಯಲ್ಲಿ ಚುನಾವಣೆ ಇದ್ದ ಕಾರಣ ಮತದಾನ ಮಾಡಲು ಅರ್ಚನಾ ಬಂದಿದ್ದರು. ಆದರೆ, ಜಿಗಣಿಯ ವಾರ್ಡ್ನಂ 18ರಲ್ಲಿ ಆಕೆಯ ಹೆಸರು ಸಿಗದ ಕಾರಣ ಮತದಾನ ಮಾಡದೇ ವಾಪಸಾಗಿದ್ದರು. ಜಿಗಣಿಯಲ್ಲಿರುವ ಮನೆಯಲ್ಲಿ ರಾತ್ರಿವರೆಗೂ ಇದ್ದು, ಬೆಳ್ಳಂದೂರಿನಲ್ಲಿರುವ ಮನೆಗೆ ಹಿಂತಿರುಗುತ್ತಿದ್ದರು. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಅರ್ಚನಾರ ತಂದೆ ನಿಧನ ಹೊಂದಿದ್ದಾರೆ. ಅವರು ಕೆಲ ಬಾಡಿಗೆ ಮನೆಗಳನ್ನು ಅರ್ಚನಾ ಹೆಸರಿಗೆ ಮಾಡಿಟ್ಟಿದ್ದರು ಎನ್ನಲಾಗಿದೆ. ಆರ್ಥಿಕವಾಗಿ ಅರ್ಚನಾ ಸದೃಢರಾಗಿದ್ದರು. ಒಂದೂವರೆ ತಿಂಗಳ ಹಿಂದೆ ಜಿಗಣಿಯಲ್ಲಿದ್ದ ಅರ್ಚನಾರ ತಾಯಿ ಮನೆ ಮೇಲಿನಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದರು.
ಅರ್ಚನಾಳ ಹತ್ಯೆಗೆ ಮೊದಲೇ ಸಂಚು ರೂಪಿಸಿದ್ದ 2ನೇ ಗಂಡ ನವೀನ್, ಈತನ ಸ್ನೇಹಿತ ಸಂತೋಷ್ ಹಾಗೂ ಇತರರು ಜಿಗಣಿಯಿಂದ ಅರ್ಚನಾಳ ಕಾರು ಹಿಂಬಾಲಿಸಿಕೊಂಡು ಬಂದಿತ್ತು. ಹೊಸ ರೋಡ್ ಜಂಕ್ಷನ್ ಬಳಿ ಸಿಗ್ನಲ್ ಬೀಳುತ್ತಿದ್ದಂತೆ ಕಾರಿನ ಮೇಲೆ ದಾಳಿ ನಡೆಸಿದ್ದರು. ಆರೋಪಿಗಳು ದಾಳಿ ನಡೆಸುವುದನ್ನು ಅರಿತ ಕಾರು ಚಾಲಕ ಕಾರನ್ನು ಫುಟ್ಪಾತ್ ಮೇಲೆ ಹರಿಸಿ ತಪ್ಪಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದ. ಕಾರು ಹರಿದ ರಭಸಕ್ಕೆ ಫುಟ್ಪಾತ್ ಮೇಲಿನ ಕಂಬಿಗಳು ತುಂಡಾಗಿವೆ. ಆರೋಪಿಗಳು ಬಂದಿದ್ದ ಸ್ಕೂಟರ್ಗೂ ಕಾರು ಡಿಕ್ಕಿ ಹೊಡೆದು ಜಖಂ ಆಗಿದೆ. ನಂತರ ಕಾರಿನ ಬಾಗಿಲಿನ ಗಾಜುಗಳನ್ನು ಬ್ಯಾಟ್ ಹಾಗೂ ಲಾಂಗ್ನಿಂದ ಒಡೆದಿದ್ದಾರೆ. ಅರ್ಚನಾ ರೆಡ್ಡಿಯನ್ನು ಕಾರಿನಿಂದ ಬಲವಂತವಾಗಿ ಕೆಳಗಿಳಿಸಿ ರಸ್ತೆ ಮಧ್ಯೆ ಎಳೆದುಕೊಂಡು ಹೋಗಿ ಮಾರಕಾಸ್ತ್ರದಿಂದ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಇದಾದ ಬಳಿಕ ಕಾರಿನಲ್ಲಿದ್ದ ಕುಮಾರ್ ಹಾಗೂ ಚಾಲಕ ಪ್ರಮೋದ್ಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಅಷ್ಟರಲ್ಲಿ ಅವರಿಬ್ಬರು ಓಡಿಹೋಗಿ ಆರೋಪಿಗಳಿಂದ ತಪ್ಪಿಸಿಕೊಂಡಿದ್ದಾರೆ.
ನಡುರಸ್ತೆಯಲ್ಲಿ ಅರ್ಚನಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ ಇತರ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಅರ್ಚನಾ ಮೃತಪಟ್ಟಿರುವುದು ಕಂಡು ಬಂದಿತ್ತು. ನಂತರ ಮಗ ಕುಮಾರ್ ಹೇಳಿಕೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮೂವರು ಆರೋಪಿಗಳು ನಡುರಸ್ತೆಯಲ್ಲಿ ಅರ್ಚನಾ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸುವ ದೃಶ್ಯವನ್ನು ಸ್ಥಳಿಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ.