ಆನೇಕಲ್​ನಲ್ಲಿ ಮಹಿಳೆಯ ಭೀಕರ ಹತ್ಯೆ! ಇಡೀ ದಿನ ಕಾದು ಆಕೆಯನ್ನ ಹೆದ್ದಾರಿಯಲ್ಲೇ ಕೊಂದ ಪ್ರಿಯಕರ

New Project (5)
Published on

ಆನೇಕಲ್​: ಜಿಗಣಿ ಪುರಸಭೆ ಚುನಾವಣೆಯ ಮತದಾನ ಮುಗಿಸಿ ಕಾರಿನಲ್ಲಿ ಮನೆಗೆ ಹೋಗುತ್ತಿದ್ದ ಮಹಿಳೆಯನ್ನು ಹೆದ್ದಾರಿಯಲ್ಲೇ ಅಡ್ಡಗಟ್ಟಿದ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ದುರ್ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ಜಿಗಣಿ ಮೂಲದ ಅರ್ಚನಾ ರೆಡ್ಡಿ(32) ಕೊಲೆಯಾದವಳು. ಈಕೆಯ ಪ್ರಿಯಕರ ನವೀನ್ ಕುಮಾರ್ ಕೊಲೆ ಆರೋಪಿ. ಅರ್ಚಾನಾಗೆ ಈ ಮೊದಲು ಬೇರೊಬ್ಬನ ಜತೆ ಮದುವೆ ಆಗಿತ್ತು. ದಂಪತಿಗೆ ಮಗ ಕೂಡ ಇದ್ದಾನೆ. ಕೆಲ ವರ್ಷಗಳ ಹಿಂದೆ ಮೊದಲ ಪತಿಯಿಂದ ದೂರವಾದ ಅರ್ಚನಾ, ಐದಾರು ವರ್ಷಗಳಿಂದ ನವೀನ್ ಜತೆ ಸಂಬಂಧ ಇರಿಸಿಕೊಂಡಿದ್ದಳು. ನವೀನ್​ ಜತೆ 2ನೇ ಮದುವೆ ಮಾಡಿಕೊಂಡು ಒಟ್ಟಿಗೆ ನೆಲೆಸಿದ್ದಳು.

ಎಲ್ಲವೂ ಚೆನ್ನಾಗಿದೆ ಎನ್ನುವ ಹೊತ್ತಲ್ಲಿ ನವೀನ್​ ಮತ್ತು ಅರ್ಚನಾ ನಡುವೆ ಆಸ್ತಿ ವಿವಾದಕ್ಕೆ ಕೌಟುಂಬಿಕ ಕಲಹ ಶುರುವಾಗಿ ಒಬ್ಬರ ಸಾವಲ್ಲಿ ಅಂತ್ಯವಾಗಿದೆ. ಚನ್ನಪಟ್ಟಣದಲ್ಲಿರುವ ಆಸ್ತಿ ವಿಚಾರವಾಗಿ ಇವರಿಬ್ಬರ ನಡುವೆ ಗಲಾಟೆಯಾಗಿ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ನವೀನ್​ನಿಂದ ದೂರವಾದ ಅರ್ಚನಾ, ಮಗನೊಂದಿಗೆ ಬೆಳ್ಳಂದೂರಿನಲ್ಲಿ ವಾಸವಿದ್ದಳು. ನಿನ್ನೆ(ಡಿ.28) ಜಿಗಣಿ ಪುರಸಭೆಗೆ ಚುನಾವಣೆ ನಡೆಯಿತು. ಮತದಾನ ಮಾಡಲು ಅರ್ಚನಾ ಜಿಗಣಿಗೆ ಬರುತ್ತಾಳೆ ಎಂದು ತಿಳಿದಿದ್ದ ನವೀನ್ ಕುಮಾರ್, ಹೊಸೂರು ರಸ್ತೆಯ ಹೊಸರೋಡ್ ಸಿಗ್ನಲ್ ಬಳಿ ತನ್ನ ಸಹಚರರೊಂದಿಗೆ ಕಾಯುತ್ತಾ ಕೂತಿದ್ದ.

ಇದ್ಯಾವುದರ ಪರಿವೇ ಇಲ್ಲದ ಅರ್ಚನಾ, ತನ್ನ ಮಗನ ಜತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಳು. ರಾತ್ರಿ 10:30ರ ಸುಮಾರಿನಲ್ಲಿ ಬೆಳ್ಳಂದೂರು ಕಡೆ ಕಾರು ಹೊರಟಿತ್ತು. ಹೊಸ ರೋಡ್ ಸಿಗ್ನಲ್ ಬಳಿ ಸಿಗ್ನಲ್ ಬೀಳುತ್ತಿದ್ದಂತೆ ಕಾರನ್ನು ಅಡ್ಡಗಟ್ಟಿದ ನವೀನ್​ ಮತ್ತು ಸಹಚರ ಸಂತೋಷ್​ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆ ಮಾಡಿ ಅರ್ಚನಾಳನ್ನು ಕೊಂದಿದ್ದಾರೆ. ಮಗ ಮತ್ತು ಚಾಲಕ ಕಾರಿನಿಂದ ಇಳಿದು ತಪ್ಪಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅರ್ಚನಾ ರೆಡ್ಡಿ ಮೊದಲ ಪತಿಯಿಂದ ವಿಚ್ಛೇದನ ಪಡೆದು, ಜೀವನಾಂಶ ಪಡೆದಿದ್ದರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net