

ತುಮಕೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಮುಖ್ಯಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಾ ನಗರದ ಬೇಗಂ ಮೊಹಲ್ಲಾದ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಮಹಮ್ಮದ್ ಇಕ್ಬಾಲ್ ಅವಟಿ ಬಂಧಿತ. 2 ತಿಂಗಳ ಹಿಂದೆ ಶಾಲೆ ಬಿಟ್ಟ ಬಳಿಕ ವಿಶೇಷ ತರಗತಿ ನೆಪದಲ್ಲಿ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ತನ್ನ ಕಚೇರಿಗೆ ಕರೆಸಿಕೊಂಡ ಮುಖ್ಯಶಿಕ್ಷಕ, 50 ರೂಪಾಯಿ ಕೊಡುವುದಾಗಿ ಲೈಂಗಿಕ ಕಿರುಕುಳ ನೀಡಿದ್ದ. ಈ ಕುರಿತು ನೊಂದ ವಿದ್ಯಾರ್ಥಿನಿ ಪಾಲಕರ ಬಳಿ ಅಳಲು ತೋಡಿಕೊಂಡಿದ್ದಳು. ವಿದ್ಯಾರ್ಥಿನಿಯ ಮಾಹಿತಿ ಹಿನ್ನೆಲೆ ಪಾಲಕರು ಶಿರಾ ಠಾಣೆಯಲ್ಲಿ ಡಿ.21ರಂದು ದೂರು ದಾಖಲಿಸಿದ್ದರು.
ಕಳೆದ ಐದಾರು ತಿಂಗಳಿಂದ ಆರೋಪಿ ಮಹಮ್ಮದ್ ಇಕ್ಬಾಲ್ ಅವಟಿ ಶಾಲೆಯಲ್ಲಿ ಅನುಚಿತ ವರ್ತನೆ, ಅಶ್ಲೀಲ ಆವಭಾವ ಮಾಡುತಿದ್ದ. ವಿನಾಕಾರಣ ವಿದ್ಯಾರ್ಥಿನಿಯರ ಮೈಮುಟ್ಟುತಿದ್ದ ಎಂದು ಆರೋಪಿ ಕೇಳಿಬಂದಿದೆ. ಓರ್ವ ವಿದ್ಯಾರ್ಥಿನಿಯ ಪೋಷಕರು ಶಿರಾ ಠಾಣೆಗೆ ದೂರು ಕೊಟ್ಟ ಹಿನ್ನೆಲೆ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅತ್ತ ಆರೋಪ ಕೇಳಿಬರುತ್ತಿದ್ದಂತೆ ಮಹಮ್ಮದ್ ಇಕ್ಬಾಲ್ ಅವಟಿಯನ್ನು ಕೆಲಸದಿಂದ ಅಮಾನತು ಮಾಡಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕರು ಆದೇಶಿಸಿದ್ದರು. ಆರೋಪಿ ಶಿಕ್ಷಕನನ್ನು ತುಮಕೂರು ವಿಶೇಷ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಡಿಡಿಪಿಐ ಕೃಷ್ಣಮೂರ್ತಿ ಆದೇಶಿಸಿದ್ದಾರೆ.