

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸುತ್ತಿದೆ ಕಮಿಷನ್ ಬಾಂಬ್. ರಾಜ್ಯ ಸರ್ಕಾರ ಮಾತ್ರವಲ್ಲ, ಬಿಬಿಎಂಪಿ ಕೂಡ ಕಮಿಷನ್ ಪಡೆಯುತ್ತಿದೆ. ರಾಜ್ಯ ಸರ್ಕಾರ 40% ಕಮಿಷನ್ ಪಡೆಯುತ್ತಿದ್ದರೆ, ಬಿಬಿಎಂಪಿ 50% ಕಮಿಷನ್ ವಸೂಲಿ ಮಾಡುತ್ತಿದೆ ಎಂದು ಮೂರು ಸಂಘಗಳು ಗಂಭೀರ ಆರೋಪ ಮಾಡಿವೆ. ಅಷ್ಟೇ ಅಲ್ಲ ಈ ಕುರಿತು ಪ್ರಧಾನಿ ಅವರಿಗೆ ಪತ್ರ ಬರೆಯಲು ಗುತ್ತಿಗೆದಾರ ಕೆಂಪಣ್ಣ ಟೀಂ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಗುತ್ತಿಗೆದಾರರ ಸಂಘ ನಿರ್ಧರಿಸಿದ್ದು, ರಾಜ್ಯ ಸರ್ಕಾರಕ್ಕೆ ಕಮಿಷನ್ ಕಂಟಕ ಎದುರಾಗಿದೆ.
ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ನನ್ನ ಜೀವನದಲ್ಲಿ ನೋಡಿರುವ ಅತ್ಯಂತ ಭ್ರಷ್ಟ ಸರ್ಕಾರ ಇದು. ಶೇ.40 ಪರ್ಸಂಟೇಜ್ಗಿಂತ ಹೆಚ್ಚಾಗಿದೆ. ಈ ಕುರಿತು ತನಿಖೆ ಮಾಡಲಿ, ದಾಖಲೆ ಕೊಡ್ತೇವೆ. ನ್ಯಾಯಾಂಗ ತನಿಖೆ ಮಾಡಲಿ. ನಾನು ದಾಖಲೆ ಕೊಟ್ಟರೆ ಗುತ್ತಿಗೆದಾರರಿಗೆ ತೊಂದರೆ ಕೊಡ್ತಾರೆ. ಶೇ.40 ಪರ್ಸಂಟೇಜ್ ಕಮಿಷನ್ ಕುರಿತು ಪ್ರಧಾನಿ ಅವರಿಗೆ ಪತ್ರ ಬರೆದರೂ ಪ್ರಯೋಜನ ಆಗಿಲ್ಲ. ಹೀಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಕಮಿಷನ್ ವಿರುದ್ಧ ಹೋರಾಟ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.
ರಾಜ್ಯ ಗುತ್ತಿಗೆದಾರರ ಸಂಘ, ವಸತಿ ಶಿಕ್ಷಣ ಸಂಸ್ಥೆಗಳ ಗುತ್ತಿಗೆದಾರರ ಸಂಘ, ಬಿಬಿಎಂಪಿ ಗುತ್ತಿಗೆದಾರರ ಸಂಘಗಳು ಕಮಿಷನ್ ಆರೋಪ ಮಾಡಿವೆ. ಬುಧವಾರ ಮಧ್ಯಾಹ್ನ ಸಿದ್ದರಾಮಯ್ಯ ನಿವಾಸದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಞ ಮತ್ತು ಪದಾಧಿಕಾರಿಗಳ ಸಭೆ ನಡೆದಿದ್ದು, ಸದನದ ಒಳಗೆ ಮತ್ತು ಹೊರಗೆ ದೊಡ್ಡ ಹೋರಾಟ ನಡೆಸಲು ಸಿದ್ದರಾಮಯ್ಯ ಯೋಜನೆ ರೂಪಿಸುತ್ತಿದ್ದಾರೆ. ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಕೆಂಪ್ಪಣ್ಣ, ಕಮಿಷನ್ ಕೇಳ್ತಾರೆ. ಇವರು ಮಾನ ಮರ್ಯಾದೆ ಇಲ್ಲದ ಜನ. ಪ್ರಧಾನ ಮಂತ್ರಿ ಅವರಿಗೆ ಇನ್ನೊಂದು ಪತ್ರ ಬರೆಯುತ್ತೇವೆ. ಸಿದ್ದರಾಮಯ್ಯನವರಿಗೆ ನಾವು ಯಾವುದೇ ದಾಖಲೆ ನೀಡಿಲ್ಲ. ಸದನದಲ್ಲಿ ಪ್ರಸ್ತಾಪಿಸ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯರ ಜತೆ ಚರ್ಚಿಸಿದ್ದನ್ನ ಬಹಿರಂಗ ಮಾಡಲ್ಲ. ಎಲ್ಲ ಶಾಸಕರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಎಲ್ಲ ಶಾಸಕರು ಶೇ.10- ಶೇ.15 ಕಮಿಷನ್ ಕೇಳ್ತಿದ್ದಾರೆ. ಇಡೀ ಸಿಸ್ಟಂ ಕರಪ್ಟ್ ಆಗಿದೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ನನ್ನ ಆರೋಪ ಸಾಬೀತಾಗದಿದ್ದರೆ ಏನು ಬೇಕಾದರೂ ಶಿಕ್ಷೆ ಕೊಡಿ. ನ್ಯಾಯಾಂಗ ತನಿಖೆ ಮಾಡಿದರೆ ಮಾತ್ರ ನಾವು ದಾಖಲೆ ಕೊಡ್ತೀವಿ ಎಂದರು.
ಉಸ್ತುವಾರಿ ಸಚಿವರೇ ಹಣ ಸಂಗ್ರಹ ಮಾಡ್ತಿದ್ದಾರೆ. ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಕಮಿಷನ್ ಹಣ ಕಲೆಕ್ಷನ್ ಮಾಡುವಂತೆ ಹೇಳಿದ್ದಾರೆ. ಮೂರು ವರ್ಷದಿಂದ ಪೇಮೆಂಟೇ ಮಾಡಿಲ್ಲ. ಆರ್ ಆರ್ ನಗರದಲ್ಲಿ 10 ಸಾವಿರ ಕೋಟಿ ರೂ. ಕೆಲಸ ಮಾಡ್ಸಿದಾರೆ. ಆರ್ಆರ್ ನಗರ ಏನ್ ಇಂಪ್ರ್ಯೂವ್ ಆಗಿದೆ? ಮುನಿರತ್ನ ಹಣ ಕಲೆಕ್ಟ್ ಮಾಡಿ ಅಂತ ಹೇಳಿರುವ ಬಗ್ಗೆ ವರದಿ ಇದೆ ಎಂದು ಕೆಂಪಣ್ಣ ಕಿಡಿಕಾರಿದರು. ಕೆಲ ಮಿನಿಸ್ಟರ್ಗಳು ನಮ್ಮ ಸಂಘಟನೆಯನ್ನೇ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ಬಗ್ಗೆ ನಮಗೆ ಗೌರವ ಇದೆ. ಆದರೆ ಪರಿಸ್ಥಿತಿ ಸರಿಯಿಲ್ಲ. ಅವರು ಅಸಹಾಯಕರಾಗಿದ್ದಾರೆ. ಅವರ ಮಾತನ್ನ ಯಾವುದೇ ಅಧಿಕಾರಿಗಳು ಕೇಳುತ್ತಿಲ್ಲ. ನನಗೆ ಭಯ ಇದೆ, ನಮ್ಮ ಗುತ್ತಿಗೆದಾರರಿಗೆ ಭಯ ಇದೆ ಎಂದರು.