

ಬೆಂಗಳೂರು: ಪ್ರೇಯಸಿಯ ಚಿನ್ನದ ಮೋಹ ತಣಿಸಲು ಮತ್ತು ಆಕೆಯ ಬ್ಯೂಟಿಪಾರ್ಲರ್ನ ಖರ್ಚು-ವೆಚ್ಚಕ್ಕಾಗಿ ದ್ವಿತೀಯ ದರ್ಜೆ ಸಹಾಯಕನೊಬ್ಬ ಬಿಬಿಎಂಪಿಯ ಹಣವನ್ನೇ ಆಕೆಯ ಬ್ಯಾಂಕ್ ಖಾತೆಗೆ ಜಮೆ ಮಾಡಿ ಸಿಕ್ಕಿಬಿದ್ದಿದ್ದಾನೆ.
ಬಿಬಿಎಂಪಿ ಯಲಹಂಕ ವಲಯ ಬ್ಯಾಟರಾಯನಪುರ ಕಚೇರಿಯಲ್ಲಿ ಎಸ್ಡಿಎ ಆಗಿದ್ದ ಎಂ.ಕೆ. ಪ್ರಕಾಶ್, ವಾರ್ಡ್ನಲ್ಲಿ ನಡೆಯುತ್ತಿದ್ದ ಕೆಲಸಕ್ಕೆ ಚೆಕ್ ಮೂಲಕ ಅಥವಾ ಆರ್ಟಿಜಿಎಸ್ನಲ್ಲಿ ಹಣ ಬಿಡುಗಡೆ ಮಾಡಬೇಕಿತ್ತು. ಬ್ಯೂಟಿಷಿಯನ್ ಕಾಂಚನಾ ಜತೆ ಪ್ರಕಾಶ್ಗೆ ಸ್ನೇಹ ಬೆಳೆದು ಸಲುಗೆಗೆ ತಿರುಗಿತ್ತು. ಪಾಲಿಕೆ ಖಾತೆಯಿಂದ ಚೆಕ್ ಅಥವಾ ಆರ್ಟಿಜಿಎಸ್ನಲ್ಲಿ ಹಣ ವರ್ಗಾವಣೆ ಮಾಡುವಾಗ ತನ್ನ ಅಥವಾ ಪ್ರೇಯಸಿ ಬ್ಯಾಂಕ್ ಖಾತೆಗೆ ಪ್ರಕಾಶ್ ಜಮೆ ಮಾಡುತ್ತಿದ್ದ. ಆದರೆ, ಪಾಲಿಕೆ ಲೆಕ್ಕಪತ್ರದಲ್ಲಿ ಮಾತ್ರ ಸಂಬಂಧಪಟ್ಟ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗಿದೆ ಎಂದು ಉಲ್ಲೇಖ ಮಾಡುತ್ತಿದ್ದ. 2021ರ ನವೆಂಬರ್ನಿಂದ 14.07 ಲಕ್ಷ ರೂ. ದುರುಪಯೋಗ ಪಡಿಸಿಕೊಂಡಿದ್ದ.
ಈ ಬಗ್ಗೆ ಕಾರ್ಯಪಾಲಕ ಇಂಜಿನಿಯರ್ (ವಿದ್ಯುತ್) ರಾಜೇಂದ್ರ ನಾಯ್ಕ್ ದೂರು ದಾಖಲಿಸಿದ್ದಾರೆ. ಜು.4ರಂದು ಮುಖ್ಯ ಲೆಕ್ಕಪರಿಶೋಧಕರು, ಪಾಲಿಕೆ ಲೆಕ್ಕಪರಿಶೋಧನೆ ಶುರು ಮಾಡಿದ ಮೇಲೆ ಪ್ರಕಾಶ್ ಅನುಮತಿ ಪಡೆಯದೆ ರಜೆ ಹಾಕುತ್ತಿದ್ದ. ಇತ್ತ ಲೆಕ್ಕಪರಿಶೋಧನೆಗೂ ಲೆಕ್ಕಪತ್ರ ಹಾಜರುಪಡಿಸುತ್ತಿರಲಿಲ್ಲ. ಅನುಮಾನ ಬಂದು ಕೆನರಾ ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್ ಪಡೆದು ಪರಿಶೀಲನೆ ನಡೆಸಿದಾಗ ಅನುಮಾನಾಸ್ಪದ ವ್ಯವಹಾರಗಳು ನಡೆದಿರುವುದು ಕಂಡು ಬಂದಿತ್ತು. ಪ್ರಕಾಶ್ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಲೆಕ್ಕಪರಿಶೋಧನೆ ನಡೆಸಿದಾಗ 14.07 ಲಕ್ಷ ರೂ.ಗಳನ್ನು ಅಕ್ರಮವಾಗಿ ಬೇರೆಯವರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ರಾಜೇಂದ್ರ ನಾಯ್ಕ್ ತಿಳಿಸಿದ್ದಾರೆ.
ದೂರಿನ ಮೇರೆಗೆ ಆರೋಪಿಗಳಾದ ಥಣಿಸಂದ್ರದ ಎಕೆ ಕಾಲನಿ ನಿವಾಸಿ ಪ್ರಕಾಶ್(39) ಮತ್ತು ಯಲಹಂಕ ಉಪನಗರದ ಬ್ಯೂಟಿಷಿಯನ್ ಕಾಂಚನಾ(30) ಅವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಈಶಾನ್ಯ ವಿಭಾಗ ಡಿಸಿಪಿ ಡಾ. ಅನೂಪ್ ಎ. ಶೆಟ್ಟಿ ತಿಳಿಸಿದ್ದಾರೆ.
ಆಭರಣ ಕೊಡುಗೆ: ಒಂದೂವರೆ ವರ್ಷದಿಂದ ಕಾಂಚನಾ ಬ್ಯಾಂಕ್ ಖಾತೆಗೆ ಪಾಲಿಕೆ ಹಣವನ್ನು ಪ್ರಕಾಶ್ ಜಮೆ ಮಾಡಿದ್ದಾನೆ. ಇದರಿಂದ ಆಕೆ ಚಿನ್ನಾಭರಣ ಖರೀದಿ ಮಾಡಿದ್ದಳು. ಅಲ್ಲದೆ, ಮೋಜು-ಮಸ್ತಿ ಮಾಡಲು ಪ್ರಕಾಶ್ ಮತ್ತು ಕಾಂಚನಾ ಪಾಲಿಕೆ ಹಣ ಬಳಕೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.