ವಿಡಿಯೋ ಗೇಮ್ ಆಡ್ಬೇಡ ಅಂದ್ರೂ ಕೇಳದೆ ಸಾವಿಗೆ ಶರಣಾದ ಹೈಸ್ಕೂಲ್​ ವಿದ್ಯಾರ್ಥಿ

Boy
Published on

ಕಲಬುರಗಿ: ಸದಾ ಮೊಬೈಲ್​ನಲ್ಲಿ ತಲ್ಲೀನವಾಗಿರಬೇಡ. ವಿಡಿಯೋ ಗೇಮ್ ಆಡಬೇಡ ಎಂದು ಪಾಲಕರು ಬೈದು ಬುದ್ಧಿ ಹೇಳಿದ್ದರಿಂದ ಬ್ರಹ್ಮಪುರ ಬಡಾವಣೆಯಲ್ಲಿ ಶುಕ್ರವಾರ ನಸುಕಿನ ಜಾವ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಮೂಲಕ ಗೇಮ್ ಗೀಳಿಗೆ ಬಾಲಕ ಬಲಿಯಾದಂತಾಗಿದೆ. ಕೆಲ ತಿಂಗಳ ಹಿಂದಷ್ಟೆ ಜನತಾ ಲೇಔಟ್ನಲ್ಲಿ ಉದ್ಯಮಿಯೊಬ್ಬರ ಪುತ್ರ ಹೀಗೆ ಸೂಸೈಡ್ ಮಾಡಿಕೊಂಡಿದ್ದ.

ರಾಹುಲ್ ಸೊಲ್ಲಾಪುರ (15) ಸಾವಿಗೆ ಶರಣಾದವ. ಖಾಸಗಿ ಶಾಲೆಯಲ್ಲಿ 9ನೇ ತರಗತಿ ಪಾಸಾಗಿದ್ದ. ಒಂದೆರಡು ವರ್ಷಗಳಿಂದ ಮೊಬೈಲ್​ಲ್ಲಿ ಅತಿಯಾಗಿ ವಿಡಿಯೋ ಗೇಮ್ ಆಡುತ್ತಿದ್ದ. ಇದರಿಂದಾಗಿ ಓದಿಗೆ ಪೆಟ್ಟು ಬೀಳಲಿದೆ ಎಂದು ಆತಂಕಗೊಂಡ ಪೋಷಕರು ಹಲವಾರು ಸಲ ಬುದ್ಧಿ ಹೇಳಿದ್ದರು. ದಿನದ ಬಹುಕಾಲ ಮೊಬೈಲ್​ನಲ್ಲೇ ತಲ್ಲೀನನಾಗಿರುತ್ತಿದ್ದಾಗ ತಂದೆ-ತಾಯಿ ಜತೆಗೆ ಹಿಂದೆ ವಾದಕ್ಕೂ ಇಳಿದಿದ್ದ.

ವಿಡಿಯೋ ಗೇಮ್ ಆಡುತ್ತಿರುವುದನ್ನು ಗಮನಿಸಿದ ಪಾಲಕರು ಗುರುವಾರ ಸಂಜೆ ಬೈದು ಬುದ್ಧಿ ಹೇಳಿದ್ದರು. ಇದರಿಂದಾಗಿ ನೊಂದು ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾನೆ. ಬೆಳಗ್ಗೆ ಪಾಲಕರು ನೋಡಿ ತೀವ್ರ ಆಘಾತಕ್ಕೆ ಒಳಗಾಗಿದ್ದು, ರೋದನ ಮುಗಿಲು ಮುಟ್ಟಿತ್ತು.

ಎಸಿಪಿ ಕಿಶೋರಬಾಬು, ಇನ್ಸ್ಪೆಕ್ಟರ್ ಅರುಣಕುಮಾರ ಮುರಗೊಂಡಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಶವದ ಮರಣೋತ್ತರ ಪರೀಕ್ಷೆ ಬಳಿಕ ಪಾಲಕರಿಗೆ ಹಸ್ತಾಂತರಿಸಿದರು. ಕರೊನಾ ಪರೀಕ್ಷೆಗಾಗಿ ಗಂಟಲ ದ್ರವ ಸಹ ಸಂಗ್ರಹಿಸಿ ಲ್ಯಾಬ್ಗೆ ರವಾನಿಸಲಾಗಿದೆ. ರಾಘವೇಂದ್ರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net