ಕಡಬ: ಕುಂತೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ಸರ್ಕಾರ 90 ಲಕ್ಷ ರೂ. ಮಂಜೂರುಗೊಳಿಸಿದೆ ಎಂದು ಶಾಲಾ ಹಳೇ ವಿದ್ಯಾರ್ಥಿ, ಕಾಂಗ್ರೆಸ್ ಮುಖಂಡ ರಾಯ್ ಅಬ್ರಹಾಂ ಹೇಳಿದರು.
ಮಂಗಳವಾರ ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಶಾಲೆಯಲ್ಲಿ ಕಾಮಗಾರಿ ನಡೆಸುತ್ತಿದ್ದ ವೇಳೆ ಶಾಲಾ ಕಟ್ಟಡ ಕುಸಿದಿತ್ತು. ಬಳಿಕದ ಬೆಳವಣಿಗೆಯಲ್ಲಿ ಶಾಲೆ ಎಲ್ಲ ಕೊಠಡಿಗಳು ಯೋಗ್ಯವಾಗಿಲ್ಲ ಎನ್ನುವ ಕಾರಣಕ್ಕೆ ಅದನ್ನು ತೆರವುಗೊಳಿಸಿ ನೂತನ ಐದು ಕೊಠಡಿಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಸರ್ಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಶಿಫಾರಸ್ಸಿನಂತೆ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, 90 ಲಕ್ಷ ರೂ. ಅನುದಾನ ಮಂಜೂರುಗೊಂಡಿದೆ ಎಂದರು.
ಕುಂತೂರು ಶಾಲಾ ಕಟ್ಟಡದ ಹಿಂಭಾಗದಲ್ಲಿ ತಡೆಗೋಡೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಲಾಗಿದೆ. ಅಧಿಕೃತವಾದ ಯಾವುದೇ ಕರಾರು ಮಾಡದೆ ಇಂಜಿನಿಯರ್, ಗುತ್ತಿಗೆದಾರ, ಪಂಚಾಯಿತಿ ಸೇರಿಕೊಂಡು ಹಣ ಹೊಡೆಯುವ ಉದ್ದೇಶದಿಂದ ಕಳಪೆ ಕಾಮಗಾರಿ ಮಾಡಿ ಅವ್ಯವಹಾರ ನಡೆಸಲಾಗಿದೆ. ಮುಖ್ಯವಾಗಿ ತಾಪಂ ಇ.ಒ., ಪಿ.ಡಿ.ಒ. ಗುತ್ತಿಗೆದಾರರು, ಪಂಚಾಯಿತಿ ಆಡಳಿತ ಮಂಡಳಿಯವರಿಗೆ, ಕುಂತೂರು ಒಂದನೇ ವಾರ್ಡ್ ಸದಸ್ಯರಿಗೆ ತಿಳಿಯದೆ ಈ ಕೆಲಸ ನಡೆದಿಲ್ಲ. ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪೆರಾಬೆ ಪಂಚಾಯಿತಿಯ ಒಂದನೇ ವಾರ್ಡ್ ಸದಸ್ಯರು, ಆಡಳಿತ ಮಂಡಳಿಗೆ ಹೆಚ್ಚಿನ ಜವಾಬ್ದಾರಿ, ಕಟ್ಟಡ ಕುಸಿತದ ನೈತಿಕ ಹೊಣೆಗಾರಿಕೆ ಇರುವುದರಿಂದ ಅವರೆಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ತಪ್ಪಿದಲ್ಲಿ ಕಡಬ ತಾಲೂಕು ಕಚೇರಿ ಎದರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಕಡಬ ತಹಸೀಲ್ದಾರ್ ಅವರಿಗೆ ದೂರು ನೀಡಲಾಗಿದೆ ಎಂದರು.
ಗೋಷ್ಠಿಯಲ್ಲಿ ಹಳೇ ವಿದ್ಯಾರ್ಥಿ ಗುರುರಾಜ್ ಕೇವಲ, ಸಾಮಾಜಿಕ ಮುಂದಾಳು ಸಾಜಾನ್ ವರ್ಗೀಸ್ ಉಪಸ್ಥಿತರಿದ್ದರು.