ವಿಜಯವಾಣಿ ಸುದ್ದಿಜಾಲ ಗುರುಪುರ
ಕರೊನಾ ಸಂದರ್ಭ ಸರ್ಕಾರದ ಇತರ ಸಂಸ್ಥೆಗಳಂತೆ ಕೆಎಸ್ಸಾರ್ಟಿಸಿಯೂ ಸೊರಗಿತ್ತು. ಬಳಿಕ ಸರ್ಕಾರ ಪರಿಚಯಿಸಿದ ಶಕ್ತಿ ಯೋಜನೆ ಯಶಸ್ವಿಯಾಗಿದ್ದು, ಈ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ನರ್ಮ್ ಬಸ್ ಸೇವೆ ಆರಂಭಗೊಂಡಿದೆ. ಅಮೃತನಗರ ಪ್ರದೇಶದಲ್ಲಿ ಪ್ರಸ್ತುತ ಒಂದು ನರ್ಮ್ ಬಸ್ ಸೇವೆ ಇದ್ದು, ಸ್ಥಳೀಯರ ಬೇಡಿಕೆಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಬಸ್ ಸೇವೆಗೆ ಪ್ರಯತ್ನಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಕ(ಡಿವಿಜನಲ್ ಕಂಟ್ರೋಲರ್) ರಾಜೇಶ್ ಶೆಟ್ಟಿ ಹೇಳಿದರು.
ವಾಮಂಜೂರು ಮನಪಾ ತಿರುವೈಲು ವಾರ್ಡ್‌ನ ಅಮೃತನಗರ ಪೌರ ಸಮಿತಿ ಆಶ್ರಯದಲ್ಲಿ ದಿ.ಲಿಂಗಮಾರುಗುತ್ತು ಶಿವಣ್ಣ ಶೆಟ್ಟಿ ಸ್ಮರಣಾರ್ಥ ವಾಮಂಜೂರು ತಿರುವೈಲಿನ ಅಮೃತನಗರ ಸರ್ಕಲ್‌ನಲ್ಲಿ ಬಸ್ ತಂಗುದಾಣವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್.ಸಾಲ್ಯಾನ್, ಮನಪಾ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ತಿರುವೈಲುಗುತ್ತು ಮಾತನಾಡಿದರು. ಪೌರ ಸಮಿತಿ ಅಧ್ಯಕ್ಷ ಲಕ್ಷ್ಮಣ ಶೆಟ್ಟಿಗಾರ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ನಗರ ಉತ್ತರ ಬಿಜೆಪಿ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಭಾಸ್ಕ ತೊಕ್ಕೊಟ್ಟು ಶುಭ ಹಾರೈಸಿದರು. ತಂದೆಯ ಸ್ಮರಣಾರ್ಥ ಬಸ್ ತಂಗುದಾಣ ನಿರ್ಮಿಸಲು ಆರ್ಥಿಕ ನೆರವು ನೀಡಿದ ಸಮಿತಿಯ ಉಪಾಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಅವರನ್ನು ಸನ್ಮಾನಿಸಲಾಯಿತು.
ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಎಂ. ಸ್ವಾಗತಿಸಿದರು. ಉದ್ಯಮಿ ಮೋಹನದಾಸ ಶೆಟ್ಟಿ, ಓಂ ಪ್ರಕಾಶ್ ಶೆಟ್ಟಿ ವಾಮಂಜೂರು, ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ ಶೇಣವ, ಸಮಿತಿಯ ಗೌರವಾಧ್ಯಕ್ಷ ವಿಠಲ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ರಮಾನಂದ ಎಚ್.ಎಸ್. ಮತ್ತು ಸುಧಾಕರ ಕಾರಂತ ನಿರೂಪಿಸಿದರು. ಸಮಿತಿ ಗೌರವ ಸಲಹೆಗಾರ ಹೇಮೇಂದ್ರ ವಂದಿಸಿದರು.
ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ದಿ.ಶಿವಣ್ಣ ಶೆಟ್ಟಿ ಸ್ಮರಣಾರ್ಥ ನಿರ್ಮಿಸಲಾದ ಈ ಬಸ್ ತಂಗುದಾಣದ ಮೂಲಕ ಅವರಿಗೆ ಗೌರವ ಸಲ್ಲಿಸಿದಂತಾಗಿದೆ. ಪೌರ ಸಮಿತಿಗಳು ಇದ್ದಲ್ಲಿ ಸ್ಥಳೀಯವಾಗಿ ಉತ್ತಮ ಕೆಲಸಗಳು ಆಗುತ್ತವೆ ಎಂಬುದಕ್ಕೆ ಈ ಸುಂದರ ಬಸ್ ತಂಗುದಾಣ ಸಾಕ್ಷಿ.
ಪ್ರವೀಣ್‌ಚಂದ್ರ ಆಳ್ವ ತಿರುವೈಲುಗುತ್ತು, ಮನಪಾ ಪ್ರತಿಪಕ್ಷ ನಾಯಕ
ಆರೋಗ್ಯ ಉಚಿತ ಶಿಬಿರ
ಪೌರ ಸಮಿತಿ ವತಿಯಿಂದ ತಲಪಾಡಿ ದೇವಿನಗರದ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಅಮೃತನಗರ ಸರ್ಕಲ್‌ನಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಯಿತು. ಆಸ್ಪತ್ರೆಯ ಡಾ.ಕಾರ್ತಿಕ್ ರೈ ಮತ್ತು ಡಾ.ಅಶ್ವಿನಿ ಮರಾಠೆ ಅವರ ವೈದ್ಯಕೀಯ ತಂಡವು ಸ್ಥಳೀಯರ ಆರೋಗ್ಯ ತಪಾಸಣೆಗೈದು ಚಿಕಿತ್ಸೆ, ಸಲಹೆ ನೀಡುವುದರ ಜತೆಗೆ ಅಗತ್ಯವುಳ್ಳವರಿಗೆ ಶಾರದಾ ಆರೋಗ್ಯ ಕಾರ್ಡ್ ವಿತರಿಸಿತು. ಶಿಬಿರದಲ್ಲಿ ಸೊಂಟ ನೋವು, ಚರ್ಮ ರೋಗ, ಪಕ್ಷವಾತ, ಬೆನ್ನು ನೋವು, ಆರ್ಥೈಟಿಸ್ ಸ್ನಾಯು ನೋವು, ಗ್ಯಾಸ್ಟ್ರಿಕ್ ಸಂಬಂಧಿ ಸಮಸ್ಯೆ, ಬಿಳಿ ಮುಟ್ಟು, ಸಂಧಿ ವಾತ ಮತ್ತಿತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಯಿತು.