

ಆನೇಕಲ್: ಲಿಫ್ಟ್ ಕೈಕೊಡುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಜನರು ಒಳಗಿರುವಾಗಲೇ ಲಿಫ್ಟ್ ಕೈಕೊಟ್ಟರೆ ಹೇಗಾಗಬೇಡ! ಅಪಾರ್ಟ್ಮೆಂಟ್ ಒಂದರಲ್ಲಿ ಅಂಥದ್ದೊಂದು ಸಂಕಟ-ಆತಂಕವನ್ನು ಒಂದಷ್ಟು ಮಂದಿ ಅನುಭವಿಸಿ ಪರದಾಡಿದ ಪ್ರಕರಣವೊಂದು ವರದಿಯಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಹುಸ್ಕೂರಿನ ಜಿಪಿಆರ್ ಬಡಾವಣೆಯಲ್ಲಿ ಈ ಪ್ರಕರಣ ಸಂಭವಿಸಿದೆ. ಇಲ್ಲಿನ ಅಪಾರ್ಟ್ಮೆಂಟ್ವೊಂದರ ನೆಲಮಹಡಿಯಿಂದ ಜನರು ಮೇಲೆ ಹೋಗಲು ಪ್ರವೇಶಿಸಿದಾಗ ಲಿಫ್ಟ್ ಜಾಮ್ ಆಗಿದೆ. ಕೆಟ್ಟುಹೋದ ಲಿಫ್ಟ್ ಅತ್ತ ಮೇಲೂ ಹೋಗದೆ, ಬಾಗಿಲು ಕೂಡ ತೆರೆದುಕೊಳ್ಳದೆ ಒಳಗಿದ್ದವರು ಪರದಾಡಿದ್ದಲ್ಲದೆ ಆತಂಕಕ್ಕೆ ಒಳಗಾಗುವಂತೆ ಆಗಿತ್ತು.
ಅಪಾರ್ಟ್ಮೆಂಟ್ನ ಏಳು ಮಂದಿ ಲಿಫ್ಟ್ ಒಳಗೆ ಸಿಲುಕಿ ಹಾಕಿಕೊಂಡು ಸುಮಾರು 2 ಗಂಟೆಗಳ ಕಾಲ ಪರದಾಡಿದರು. ಲಿಫ್ಟ್ ಬಾಗಿಲು ತೆರೆಯಲು ಯತ್ನಿಸಿ ವಿಫಲರಾಗಿ ಆತಂಕಗೊಂಡ ಇತರರು ಕೂಡಲೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸಲಾಕೆಯಿಂದ ಲಿಫ್ಟ್ ಬಾಗಿಲನ್ನು ಭೇದಿಸಿ, ಒಳಗಿದ್ದವರನ್ನು ರಕ್ಷಿಸಿದರು.