ಶರ್ಟ್​ ಫಿಟಿಂಗ್ ಸರಿ ಇಲ್ಲ ಅಂತ ಟೈಲರ್​ನ ಕತ್ತು ಹಿಸುಕಿ ಕೊಂದೇ ಬಿಟ್ಟ!

Death Indicative image
Published on

ಉತ್ತರಪ್ರದೇಶ: ಕಟಿಂಗ್ ಹಾಗೂ ಬಟ್ಟೆಯ ಫಿಟಿಂಗ್ ಒಮ್ಮೊಮ್ಮೆ ಸಮಾಧಾನವೇ ಆಗುವುದಿಲ್ಲ. ಅದಕ್ಕೆಂದೇ ಕೆಲವರು ಒಮ್ಮೆ ಎಲ್ಲಿಯಾದರೂ ಕಟಿಂಗ್​-ಫಿಟಿಂಗ್ ಇಷ್ಟವಾಯಿತು ಎನಿಸಿದರೆ ನಂತರ ಯಾವಾಗಲೂ ಅಲ್ಲಿಗೇ ಹೋಗುತ್ತಾರೆ. ಇಲ್ಲಿ ಈತ ರೆಗ್ಯುಲರ್ ಕಸ್ಟಮರ್ ಹೌದೋ ಅಲ್ಲವೋ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಈತ ಶರ್ಟ್ ಹೊಲಿದಿದ್ದು ಸರಿಯಾಗಿಲ್ಲ, ಸ್ಟಿಚಿಂಗ್ ಫಿಟ್​ ಎನಿಸುತ್ತಿಲ್ಲ ಎಂದು ಗಲಾಟೆ ತೆಗೆದು ಟೈಲರನ್ನೇ ಸಾಯಿಸಿಬಿಟ್ಟಿದ್ದಾನೆ.

ಟೈಲರ್ ಹಾಗೂ ಗ್ರಾಹಕ ಇಬ್ಬರ ಗಲಾಟೆಯಲ್ಲಿ, ಟೈಲರ್ ಪ್ರಾಣ ಕಳೆದುಕೊಂಡಿದ್ದಾನೆ. 65 ವರ್ಷದ ಅಬ್ದುಲ್ ಮಜಿದ್ ಖಾನ್​ ಮೃತಪಟ್ಟ ಟೈಲರ್. ಸಲೀಂ ಎಂಬಾತ ತಂದೆಯನ್ನು ಕೊಲೆ ಮಾಡಿದ್ದಾನೆ ಎಂಬುದಾಗಿ ಟೈಲರ್ ಪುತ್ರ ಅಬ್ದುಲ್​ ನಯೀಮ್​ ಖಾನ್​ ಪೊಲೀಸರಿಗೆ ದೂರು ನೀಡಿದ್ದಾನೆ.

ತಾನು ಕೊಟ್ಟಿದ್ದ ಬಟ್ಟೆಯನ್ನು ಸರಿಯಾಗಿ ಹೊಲಿದಿಲ್ಲ, ಶರ್ಟ್ ಫಿಟಿಂಗ್ ಸರಿ ಇಲ್ಲ ಎಂದು ಸಲೀಮ್ ಭಾನುವಾರ ರಾತ್ರಿ ಮಜಿದ್ ಖಾನ್​ ಹತ್ತಿರ ಬಂದು ಗಲಾಟೆ ಮಾಡಿದ್ದ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತೆರಳಿ ಮಜಿದ್​ ಖಾನ್​ನ ಕತ್ತು ಹಿಸುಕಿ ಸಲೀಮ್ ಸಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸಾವಿಗೆ ಕಾರಣ ಏನು ಎಂಬುದು ಇನ್ನೂ ನಿಖರವಾಗಿ ತಿಳಿದಿಲ್ಲ. ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net